ಸಾರಾಂಶ
ಉಡುಪಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯು ನಗರದ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಏ.1ರಂದು ‘ಏಪ್ರಿಲ್ ಫೂಲ್’ ಎಂಬ ವಿಶಿಷ್ಟ ಪ್ರತಿಭಟನೆಯನ್ನು ಆಯೋಜಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯು ನಗರದ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಏ.1ರಂದು ‘ಏಪ್ರಿಲ್ ಫೂಲ್’ ಎಂಬ ವಿಶಿಷ್ಟ ಪ್ರತಿಭಟನೆಯನ್ನು ಆಯೋಜಿಸಿದೆ.ಈ ಬಗ್ಗೆ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಮತ್ತು ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ವಿವರಗಳನ್ನು ನೀಡಿದರು.ಅಂದು ಮಧ್ಯಾಹ್ನ 2.30ಕ್ಕೆ ಸಮಾನಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಗರದ ಕಲ್ಸಂಕ ವೃತ್ತದಿಂದ ಇಂದ್ರಾಳಿ ರೈಲ್ವೆ ಸೇತುವೆ ವರೆಗೆ ಬೃಹತ್ ಪಾದಯಾತ್ರೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮೆರವಣಿಗೆಯಲ್ಲಿ ಉದ್ದೇಶಿತ ರೈಲ್ವೆ ಮೇಲ್ಸೇತುವೆಯ ಬೃಹತ್ ಪ್ರತಿಕೃತಿಯ ಸ್ತಬ್ಧಚಿತ್ರ ವಿಶೇಷವಾಗಿರುತ್ತದೆ. ಜೊತೆಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಹಣದ ಕೊರತೆಯನ್ನು ನೀಗಿಸಲು ಪ್ರತಿಭಟನಾಕಾರರು ಸಾರ್ವಜನಿಕರಿಂದ ಭಿಕ್ಷೆ ಬೇಡಿ, ಶೂ ಪಾಲೀಶ್ ಮಾಡಿ ಸಂಗ್ರಹವಾದ ಹಣವನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ.ಈ ಮೇಲ್ಸೇತುವೆ ಪೂರ್ಣಗೊಳ್ಳದೇ ಇಲ್ಲಿ ನಿತ್ಯವೂ ಅಪಘಾತಗಳು, ಗಂಭೀರ ಗಾಯ, ಜೀವಹಾನಿಯೂ ಆಗಿವೆ. ಕಳೆದ 9 ವರ್ಷಗಳಿಂದ ಸರ್ಕಾರ, ಸಂಸದರು, ಗುತ್ತಿಗೆದಾರರು, ಅಧಿಕಾರಿಗಳು ಈ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸದೆ ಪ್ರದೇಪದೆ ಗಡುವು ನೀಡಿ, ಸುಳ್ಳು ಹೇಳಿ ಉಡುಪಿಯ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಆದ್ದರಿಂದ ಏ.1ರಂದು ಮೂರ್ಖರ ದಿನದಂತೆ ಈ ವಿಶಿಷ್ಟಮಯ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡು ಜನವಾಹನ ಸಂಚಾರ ಸುಗಮವಾಗು ವರೆಗೂ ಈ ಹೋರಾಟ ನಡೆಯುತ್ತದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಕುಶಲ ಶೆಟ್ಟಿ, ಮಹಾಬಲ ಕುಂದರ್, ಚಾರ್ಲ್ಸ್ ಆ್ಯಂಬ್ಲರ್, ಅನ್ಸಾರ್ ಅಹಮ್ಮದ್, ಅಬ್ದುಲ್ ಅಜೀಝ್, ಮೀನಾಕ್ಷಿ ಮಾಧವ, ರಾಮಪ್ಪ ಸಾಲಿಯಾನ್, ಮಾಧವ ಅಮೀನ್ ಮುಂತಾದವರಿದ್ದರು.