ಸಾರಾಂಶ
ಕಾಲೇಜು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ, ತರಗತಿಗಳು ಸುಗಮವಾಗಿ ನಡೆಸಲು ಅನುವು ಮಾಡಿಕೊಡುವಂತೆ ಸರ್ಕಾರವನ್ನು ಆಗ್ರಹ
ಕನ್ನಡಪ್ರಭ ವಾರ್ತೆ ಉಡುಪಿ
ಕಾಲೇಜು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ, ತರಗತಿಗಳು ಸುಗಮವಾಗಿ ನಡೆಸಲು ಅನುವು ಮಾಡಿಕೊಡುವಂತೆ ಸರ್ಕಾರವನ್ನು ಆಗ್ರಹಿಸಿ, ರಾಜ್ಯಾದ್ಯಂತ ಎಬಿವಿಪಿ ಕರೆಯಂತೆ, ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಅವರು ತಮ್ಮ ಮನವಿಯನ್ನು ಸ್ವೀಕರಿಸಲು ಬಾರದಿದ್ದಾಗ, ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು.ಕೊನೆಗೆ ಅಪರ ಜಿಲ್ಲಾಧಿಕಾರಿಗಳು ಬಂದು ಮನವಿಯನ್ನು ಸ್ವೀಕರಿಸಿ ಬೇಡಿಕೆಯನ್ನು ಆಲಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿಸ ಅತಿಥಿ ಉಪನ್ಯಾಸಕರ ಸಮಸ್ಯೆಯಿಂದಾಗಿ ನಮ್ಮ ಮಂಗಳೂರು ಯುನಿವರ್ಸಿಟಿಯ ಕೆಲವು ಕಾಲೇಜುಗಳಲ್ಲಿ ನಾಲ್ಕು ತಿಂಗಳಲ್ಲಿ ನಡೆಯಬೇಕಾದ ಪಠ್ಯವನ್ನು ಕೇವಲ ಎರಡು ತಿಂಗಳಲ್ಲಿ ಮುಗಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಗಳಾಗುತ್ತಿದೆ, ಆದ್ದರಿಂದ ಸರ್ಕಾರ ತಕ್ಷಣ ಈ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸಬೇಕು, ಕಾಲೇಜುಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಅಜಿತ್ ಜೋಗಿ, ನಗರ ಸಹಕಾರ್ಯದರ್ಶಿ ಕಾರ್ತಿಕ್, ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ, ಸಹ ಪ್ರಮುಖ್ ಕೃತಿ ಮತ್ತು ಪ್ರಮುಖರಾದ ಸ್ವಸ್ತಿಕ್, ನವೀನ್, ಮಂಗಳಗೌರಿ, ಪ್ರಶ್ಮ, ಶ್ರೀಹರಿ, ಅನಂತಕೃಷ್ಣ, ಆದಿತ್ಯ, ಸುಮುಖ, ಮಾಣಿಕ್ಯ, ರವಿಚಂದ್ರ ಮುಂತಾದವರಿದ್ದರು.