ಕಾಪು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗ್ಯಾಸ್ ಪೂರೈಕೆ ವ್ಯತ್ಯಯ ತೀವ್ರವಾಗಿದ್ದು, ಗ್ಯಾಸ್ ಇಂಧನ ಬಳಸುತ್ತಿದ್ದ ಆಟೋ ಚಾಲಕರು ಗ್ಯಾಸ್ ಬೆಲೆ ಏರಿಕೆಯಿಂದ ತತ್ತರಗೊಂಡಿದ್ದಾರೆ. ಇಲ್ಲಿನ ಕಟಪಾಡಿಯ ಏಜೀಸ್ ಆಟೋ ಗ್ಯಾಸ್ ಪೂರೈಕೆ ಕೇಂದ್ರದಲ್ಲಿ ಆಟೋ ಚಾಲಕರು ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದ ಘಟನೆ ನಡೆದಿದೆ.ನಗರದ ಇತರ ಆಟೋ ಗ್ಯಾಸ್ ಪಂಪ್ ಗಳಲ್ಲಿ ಬೆಲೆ ಏರಿಕೆ ಮಾಡಿಲ್ಲ, ಆದರೆ ಏಜೀಸ್ ಕಂಪನಿಯವರು ಮಾತ್ರ ಕೆಜಿಗೆ 18 ರು. ಬೆಲೆ ಏರಿಸಿದ್ದಾರೆ. ಈ ಗ್ಯಾಸ್‌ ಪಂಪ್‌ಗೆ ಗ್ಯಾಸ್ ತುಂಬಿಸಲು ಮೈಲುದ್ಧ ಸರದಿಯಲ್ಲಿ ಕಾಯುತ್ತಿದ್ದ ಚಾಲಕರು ಬೆಲೆ ಏರಿಕೆ ಮಾಡಿರುವುದನ್ನು ಕೇಳಿ ಅಲ್ಲಿನ ಸಿಬ್ಬಂದಿಯನ್ನು ಬೆಲೆ ಏರಿಕೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬೇರೆ ಪಂಪ್‌ಗಳಲ್ಲಿ 72.30 ರು. ಗೆ ಗ್ಯಾಸ್ ದೊರೆಯುತ್ತಿದ್ದರೂ ಇಲ್ಲಿ 90 ರು. ಗೆ ಗ್ಯಾಸ್ ಪೂರೈಕೆಯಾಗುತ್ತಿದೆ. ಆದರೆ ಈ ಬಗ್ಗೆ ತಮಗೇನೂ ಗೊತ್ತಿಲ್ಲ, ತಮ್ಮ ಮೇಲಿನ ಅಧಿಕಾರಿಗಳ ಆದೇಶ ಇದೆ ಎಂದಷ್ಟೇ ಹೇಳುತ್ತಿದ್ದಾರೆ.ಈ ಕಂಪನಿ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.