ಉಡುಪಿ: ‘ಬೆಳ್ಳಿ-ಬೆಳಕು’ ಗ್ರಂಥ ಲೋಕಾರ್ಪಣೆ

| Published : May 19 2024, 01:45 AM IST

ಸಾರಾಂಶ

‘ಬೆಳ್ಳಿ-ಬೆಳಕು’ ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಹಚಿಂತನ ರಾಷ್ಟ್ರೀಯ ಮಾಸಪತ್ರಿಕೆಯ ಪ್ರಕಾಶಕ ಎಸ್.ವಿ. ಆಚಾರ್ಯ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಹುಬ್ಬಳ್ಳಿಯ ‘ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ’ಯು ತನ್ನ ೨೫ ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಪ್ರಕಟಿಸಿದ ‘ಬೆಳ್ಳಿ-ಬೆಳಕು’ ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮ ಉಡುಪಿ ಜಿಲ್ಲಾ ಶ್ರೀ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಅಲೆವೂರು ಪ್ರಭಾಕರ ಆಚಾರ್ಯ ಸ್ಮಾರಕ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ವಿಶ್ವನಾಥ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘದ ಅಧ್ಯಕ್ಷ ವೆಂಕಟೇಶ ಆಚಾರ್ಯ ಉಡುಪಿ ವಹಿಸಿದ್ದರು.

ಸಹಚಿಂತನ ರಾಷ್ಟ್ರೀಯ ಮಾಸಪತ್ರಿಕೆಯ ಪ್ರಕಾಶಕ ಎಸ್.ವಿ. ಆಚಾರ್ಯ, ‘ಬೆಳ್ಳಿ-ಬೆಳಕು’ ಹಾಗೂ ‘ಅಕ್ಕಸಾಲಿಕೆ’ (ಡಾ. ಶೀಲಾಕಾಂತ ಪತ್ತಾರ್, ಬಾದಾಮಿ), ‘ವಿಶ್ವಬ್ರಾಹ್ಮಣರ ಕರ್ಮ ಪ್ರವಾಹ’ (ಜೀವಣ್ಣ ಮಸಳಿ, ಬಾಗಲಕೋಟೆ), ‘ವಾಸ್ತುಪುರುಷ: ಚರ-ಸ್ಥಿರ-ಕ್ಷಣಿಕ’ (ಶ್ರೀ ಶ್ರೀ ವೀರೇಂದ್ರ ಸ್ವಾಮೀಜಿ, ಹರಿಹರ) ಮತ್ತು ‘ಭಕ್ತಿಸುಧಾ’ (ಭೀಮಸೇನ ಬಡಿಗೇರ, ಹುಬ್ಬಳ್ಳಿ) ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಯೋಗೀಶ ಆಚಾರ್ಯ ಅಲೆವೂರು ಹಾಗೂ ಮಹಾಬಲೇಶ್ವರ ಆಚಾರ್ಯ ಸಾಲಿಗ್ರಾಮ ಆಗಮಿಸಿದ್ದರು. ಮಂಗಳೂರಿನ ಶಿಕ್ಷಕ ರಮೇಶ್ ಆಚಾರ್ಯ ಬಿ.ಜಿ. ಗ್ರಂಥಗಳನ್ನು ಪರಿಚಯಿಸಿದರು.

ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಭೀಮಸೇನ ಬಡಿಗೇರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ಪ್ರತಿಮಾ ಜೆ. ಆಚಾರ್ಯ ನಿರ್ವಹಿಸಿದರು. ಕೆ. ನಾಗರಾಜ ಆಚಾರ್ಯ ವಂದಿಸಿದರು.