ಉಡುಪಿ ಬಿಜೆಪಿ: 17ರಿಂದ ಸೇವಾ ಪಾಕ್ಷಿಕ ಅಭಿಯಾನ

| Published : Sep 09 2025, 01:01 AM IST

ಸಾರಾಂಶ

ಬಿಜೆಪಿ ವತಿಯಿಂದ ಸೆ.17ರಿಂದ ಅ.2ರ ಗಾಂಧಿ - ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜಿಲ್ಲೆಯಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ನಡೆಯಲಿದೆ.

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನವಾದ ಸೆ.17ರಿಂದ ಅ.2ರ ಗಾಂಧಿ - ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದ್ದಾರೆ.ಸೋಮವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಅಭಿಯಾನದ ಪೂರ್ವಭಾವಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ, ಅಭಿಯಾನದ ಜಿಲ್ಲಾ ಮತ್ತು ಮಂಡಲ ತಂಡವನ್ನು ಘೋಷಿಸಿ ಅವರು ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ವೀಕ್ಷಣೆಯ ಫೋಟೋ, ವರದಿ ಅಪ್ಲೋಡ್ ಪ್ರಕ್ರಿಯೆಯಲ್ಲಿ ಜಿಲ್ಲೆಯ ಶೇ .100 ಸಾಧನೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ದೊರೆತ ಹಿನ್ನೆಲೆಯಲ್ಲಿ ‘ಮನ್ ಕೀ ಬಾತ್’ ಜಿಲ್ಲಾ ಮತ್ತು ಮಂಡಲ ತಂಡಗಳ ಸದಸ್ಯರಿಗೆ ಪಕ್ಷದ ಶಾಲು ಹೊದೆಸಿ ಅಭಿನಂದಿಸಿದರು.

ಅ.2ರಂದು ಸೇವಾ ಪಾಕ್ಷಿಕ ಚಟುವಟಿಕೆಗಳ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತ ಸಂಭ್ರಮ ವರ್ಷದ ವಿಜಯ ದಶಮಿಯ ಪೂರ್ಣ ಗಣವೇಶದ ಪಥ ಸಂಚಲನದಲ್ಲಿ ಪಕ್ಷದ ಕಾರ್ಯಕರ್ತರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮಂಡಲ ಮಟ್ಟದ ಕಾರ್ಯಾಗಾರಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನದ ಎಲ್ಲಾ ಸೇವಾ ಕಾರ್ಯಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲರೂ ಬದ್ಧತೆಯಿಂದ ಕೈಜೋಡಿಸಬೇಕು ಎಂದರು.

ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶ್ರೀಕಾಂತ್ ನಾಯಕ್ ಅಭಿಯಾನದಂಗವಾಗಿ ಜಿಲ್ಲೆ, ಮಂಡಲ, ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.ಬಿಜೆಪಿ ಶಿವಮೊಗ್ಗ ನಿಕಟಪೂರ್ವ ಜಿಲ್ಲಾಧ್ಯಕ್ಷ ಮೇಘರಾಜ್ ಅವರು ಸಮಾರೋಪ ಅವಧಿಯಲ್ಲಿ, ಬಿಜೆಪಿ ಬಗ್ಗೆ ಜನರ ಧನಾತ್ಮಕ ಚಿಂತನೆಗಳನ್ನು ಅನುಮಾನಕ್ಕೆ ತಳ್ಳುವುದರಲ್ಲಿ ಕಾಂಗ್ರೆಸ್ ನಿಪುಣತೆ ಹೊಂದಿದೆ. ಆದರೆ ಕಾಂಗ್ರೆಸ್ಸಿನ ಯಾವುದೇ ಅಪಪ್ರಚಾರಗಳಿಂದ ಬಿಜೆಪಿಯಂತಹ ಬಲಾಡ್ಯ ಸಂಘಟನೆ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ವೇದಿಕೆಯಲ್ಲಿದ್ದರು. ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ನಿರೂಪಿಸಿದರು. ಅಭಿಯಾನದ ಜಿಲ್ಲಾ ಸಹಸಂಚಾಲಕ ಶಿವಕುಮಾರ್ ಅಂಬಲಪಾಡಿ ವಂದಿಸಿದರು.