ಸಾರಾಂಶ
ಶ್ರೀ ಕೃಷ್ಣ ಮಠ ಹಾಗೂ ಸ್ವಾಗತ ಸೇವಾ ಸಮಿತಿಯ ವತಿಯಿಂದ ಭಂಡಾರಕೇರಿ ಮಠದ ಪಟ್ಟದ ದೇವರನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ, ಶ್ರೀಪಾದರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆತಂದು, ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣಮಠದ ದ್ವಾರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಭಂಡಾರಿಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ತಮ್ಮ ಆತ್ಮೀಯರಾದ ಪರ್ಯಾಯ ಪೀಠಾಧೀಶ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಚಾತುರ್ಮಾಸ್ಯ ಸ್ವೀಕರಿಸುವ ಪ್ರಯುಕ್ತ ಬುಧವಾರ ಆಗಮಿಸಿದರು.ಈ ಸಂದರ್ಭ ಶ್ರೀ ಕೃಷ್ಣ ಮಠ ಹಾಗೂ ಸ್ವಾಗತ ಸೇವಾ ಸಮಿತಿಯ ವತಿಯಿಂದ ಭಂಡಾರಕೇರಿ ಮಠದ ಪಟ್ಟದ ದೇವರನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ, ಶ್ರೀಪಾದರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆತಂದು, ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣಮಠದ ದ್ವಾರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು. ತದನಂತರ ರಾಜಾಂಗಣದಲ್ಲಿ ನಡೆದ ಸಮಾರಂಭ ಶ್ರೀಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಆಶೀರ್ಚವನ ನೀಡಿದ ಪುತ್ತಿಗೆ ಶ್ರೀಗಳು, ಭಂಡಾರಕೇರಿ ಶ್ರೀಗಳು ಉಡುಪಿಯಲ್ಲಿ 37 ವರ್ಷಗಳ ಬಳಿಕ ಚಾತುರ್ಮಾಸ್ಯ ಸ್ವೀಕರಿಸಲಿದ್ದಾರೆ. ಇದರಿಂದ ಭಾಗವತ ಫಲ, ಭಗವದ್ಗೀತೆ ಕ್ಷೀರ ಎರಡೂ ಉಡುಪಿಯ ಜನತೆಗೆ ಲಭಿಸಲಿದೆ. ಭಂಡಾರ ಕೇರಿ ಶ್ರೀಪಾದರು ನಡೆಸಲಿರುವ ಮನೆಮನೆಯಲ್ಲಿ ಭಾಗವತ ಪ್ರವಚನ ಕಾರ್ಯಕ್ರಮದ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.
ಶ್ರೀ ವಿದ್ಯೇಶ ತೀರ್ಥರರು ಸ್ವಯಂ ರಚಿಸಿದ ದಾಸರ ಪದವನ್ನು ಪ್ರಸನ್ನ ಅವರು ಪ್ರಸ್ತುತಪಡಿಸಿದರು. ವಿದ್ವಾನ್ ಬಿದರಹಳ್ಳಿ ರಘೋತ್ತಮಾಚಾರ್ಯರು ಅಭಿನಂದನಾ ಭಾಷಣ ಸಲ್ಲಿಸಿದರು.ಸ್ವಾಗತ ಸಮಿತಿಯ ಯು.ಬಿ. ಶ್ರೀನಿವಾಸ್ ಪ್ರಸ್ತಾವನೆ ಸಲ್ಲಿಸಿದರು. ವಿದ್ವಾನ್ ಡಾ.ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಚಾರ್ಯ, ರತೀಶ್ ತಂತ್ರಿ, ಮಂಗಳೂರಿನ ಪ್ರದೀಪ್ ಕಲ್ಕೂರ, ಸ್ವಾಗತ ಸಮಿತಿಯ ಚಂದ್ರಶೇಖರ್ ಆಚಾರ್ಯ, ರಾಜೇಶ್ ಭಟ್, ಜಯರಾಮಚಾರ್ಯ, ರಮೇಶ್ ಭಟ್, ರವೀಂದ್ರಾಚಾರ್ಯ ಮುಂತಾದವರು ಉಪಸ್ಥಿತರಿದ್ದರು.