ಉಡುಪಿ - ಚಿಕ್ಕಮಗಳೂರು ಕ್ಷೇತ್ರ: ಕಾಂಗ್ರೆಸ್ ಗೆ ಓಟ್ ಶೇರ್ ಹೆಚ್ಚಳದ ಬಲ, ಬಿಜೆಪಿಗೆ ಜೆಡಿಎಸ್‌ ಬಲ

| Published : Apr 06 2024, 12:45 AM IST

ಉಡುಪಿ - ಚಿಕ್ಕಮಗಳೂರು ಕ್ಷೇತ್ರ: ಕಾಂಗ್ರೆಸ್ ಗೆ ಓಟ್ ಶೇರ್ ಹೆಚ್ಚಳದ ಬಲ, ಬಿಜೆಪಿಗೆ ಜೆಡಿಎಸ್‌ ಬಲ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ 4 ಮತ್ತು ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದರು. ಸಹಜವಾಗಿಯೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಅನಾಯಾಸವಾಗಿ ಗೆದ್ದಿತ್ತು.

ಸುಭಾಶ್ಚಂದ್ರ ಎಸ್.ವಾಗ್ಳೆ

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 2023ರಲ್ಲಿ ನಡೆದ ಚುನಾವಣೆಯ ಫಲಿತಾಂಶ, ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶಾಕಿರಣವೊಂದನ್ನು ತೋರಿಸಿದ್ದರೆ, ಬಿಜೆಪಿಗೆ ಈ ಬಾರಿ ಜೆಡಿಎಸ್‌ನೊಂದಿಗೆ ಸಖ್ಯ ಹೊಸ ಆಶಾಕಿರಣ ಮೂಡಿಸಿದೆ.

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ 4 ಮತ್ತು ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿವೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದರು. ಸಹಜವಾಗಿಯೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಅನಾಯಾಸವಾಗಿ ಗೆದ್ದಿತ್ತು.

ಆದರೆ ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪರಿಸ್ಥಿತಿ ಬದಲಾಗಿದೆ. ಚಿಕ್ಕಮಗಳೂರಿನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಉಡುಪಿಯ 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದರಿಂದ ಒಟ್ಟಾರೆ ಬಿಜೆಪಿ ಮತಗಳಿಕೆ ಕುಸಿದಿದೆ, ಕಾಂಗ್ರೆಸ್ ಮತಗಳಿಕೆ ಹೆಚ್ಚಿದೆ. ಇದರಿಂದ ಕಾಂಗ್ರೆಸ್ ಪಕ್ಷ ಹೊಸ ಹುರುಪಿನೊಂದಿಗೆ ಪ್ರಚಾರಕ್ಕಿಳಿದಿದೆ. ಬಿಜೆಪಿ ಮತ ಗಳಿಕೆ ಇನ್ನೂ ಕುಸಿಯದಂತೆ ಹೋರಾಟಕ್ಕಿಳಿದಿದೆ. ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಗೆ ಮತ ಪ್ರಮಾಣ ನಗಣ್ಯವಾಗಿದ್ದರೂ, ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸಾಕಷ್ಟು ಮತಪಾಲನ್ನು ಹೊಂದಿದ್ದು, ಇದು ಬಿಜೆಪಿಯ ಹುರುಪು ಹೆಚ್ಚಿಸಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು 7,18,916 (ಶೇ 62.46) ಮತಗಳನ್ನು ಗಳಿಸಿ ವಿಜಯಿ ಆಗಿದ್ದರು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 3,69,317 (ಶೇ 32.09) ಮತಗಳನ್ನು ಗಳಿಸಿ ಸೋತಿದ್ದರು. ಬಿಜೆಪಿ ಭರ್ಜರಿಯಾಗಿ 3,49,599 (ಶೇ 30.37) ಮತಗಳ ಅಂತರದಿಂದ ಗೆದ್ದಿತ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ - ಚಿಕ್ಕಮಗಳೂರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಒಟ್ಟು ಮತಗಳಿಕೆಯಲ್ಲಿ ಭಾರಿ ಕುಸಿತವಾಗಿದ್ದು, ಕಾಂಗ್ರೆಸ್ ಮತ ಗಳಿಕೆಯಲ್ಲಿ ಗಣನೀಯ ಏರಿಕೆಯಾಗಿತ್ತು.

ಉಡುಪಿ ವ್ಯಾಪ್ತಿಯ ಬಿಜೆಪಿ ಗೆದ್ದಿರುವ 4 ವಿಧಾನಸಭಾ ಕ್ಷೇತ್ರಗಳಲ್ಲಿ, ಅದರ ಸರಾಸರಿ ಮತಪಾಲು (ಓಟ್ ಶೇರ್) ಶೇ 55.25 ಆಗಿದ್ದರೆ, ಕಾಂಗ್ರೆಸ್ ನ ಮತಪಾಲು ಶೇ 41.50 ಆಗಿದೆ. ಇಲ್ಲಿ ಬಿಜೆಪಿಯ ಮತಪಾಲು 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕಡಿಮೆಯಾಗಿದೆ.

ಚಿಕ್ಕಮಗಳೂರು ವ್ಯಾಪ್ತಿಯ ಕಾಂಗ್ರೆಸ್ ಗೆದ್ದಿರುವ 4 ವಿಧಾನಸಭಾ ಕ್ಷೇತ್ರಗಳಲ್ಲಿ, ಅದರ ಸರಾಸರಿ ಮತಪಾಲು ಶೇ 42.75 ಆಗಿದ್ದರೆ, ಬಿಜೆಪಿಯ ಮತಪಾಲು ಶೇ 39.75 ಆಗಿದೆ. ಕಾಂಗ್ರೆಸ್ ಮತಪಾಲು ಶೇ 3ರಷ್ಟು ಹೆಚ್ಚಾಗಿದೆ.

ಒಟ್ಟಾರೆ ಈ ಎಲ್ಲಾ 8 ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಸರಾಸರಿ ಶೇ 47.50 ಮತಪಾಲು ಪಡೆದಿದ್ದರೆ, ಕಾಂಗ್ರೆಸ್ ಸರಾಸರಿ ಶೇ 42.12 ಮತಪಾಲು ಪಡೆದಿದೆ. ಸೋಲಿನ ಅಂತರ ಕೇವಲ ಶೇ 5.38 ಆಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಅಂತರ ಶೇ 30.37 ಇದ್ದುದು, 2023ರ ವಿಧಾನಸಭಾ ಚುನಾವಣೆಯಲ್ಲಿ ಅದು ಶೇ 5.38ಕ್ಕೆ ಇಳಿದಿರುವುದು ಗಮನಾರ್ಹವಾಗಿದೆ. ಇದೇ ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಗೆ ಉಚಿತ ಗ್ಯಾರಂಟಿಯ ಮತಗಳು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ಪಂಚ ಉಚಿತ ಗ್ಯಾರಂಟಿಗಳ ಭರವಸೆಗಳು ಅದರ ಮತಗಳಿಕೆ ಹೆಚ್ಚಳಕ್ಕೆ ದೊಡ್ಡ ಕಾರಣವಾಗಿತ್ತು. ಈಗ ಈ ಎಲ್ಲ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಿ, ಜನರು ಅದರ ಲಾಭ ಪಡೆಯುತ್ತಿದ್ದಾರೆ. ಇದು ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ನ ಮತಗಳಿಕೆ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನುವ ಲೆಕ್ಕಚಾರದಲ್ಲಿದೆ.ಬಿಜೆಪಿಗೆ ಜೆಡಿಎಸ್ ನ ಬೋನಸ್ ಮತಗಳು

ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಗೆ ಮತ ಪ್ರಮಾಣ ನಗಣ್ಯವಾಗಿದ್ದರೂ, ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸಾಕಷ್ಟು ಮತಪಾಲನ್ನು ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ (ಶೇ 14), ಮೂಡಿಗೆರೆ (ಶೇ 19) ಮತ್ತು ತರಿಕೆರೆ (ಶೇ 23)ಯಲ್ಲಿ ಜೆಡಿಎಸ್ ಗಮನಾರ್ಹ ಮತ ಗಳಿಸಿತ್ತು. ಈ ಬಾರಿ ಜೆಡಿಎಸ್ - ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ, ಜೆಡಿಎಸ್ ಮತಗಳು ಬಿಜೆಪಿಗೆ ಬೋನಸ್ ಆಗಲಿದೆ ಎನ್ನುವುದು ಬಿಜೆಪಿಯ ಧೈರ್ಯಕ್ಕೆ ಕಾರಣವಾಗಿದೆ.