ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 63,033 ಮತದಾರರ ಹೆಚ್ಚಳ

| Published : Mar 27 2024, 01:06 AM IST / Updated: Mar 27 2024, 01:07 AM IST

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 63,033 ಮತದಾರರ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು. ಈ ಬಾರಿ 15, 76, 264 ಮಂದಿ ಮತದಾನ ಅರ್ಹತೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯ ನಂತರ 63, 033 (ಶೇ 4.16) ರಷ್ಟು ಮತದಾರರು ಹೆಚ್ಚಾಗಿದ್ದಾರೆ.

ಹಿಂದಿನಿಂದಲೂ ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು, ಇದೀಗ ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಾಗಿದೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 15,13,231 ಮಂದಿ ಮತದಾರರಿದ್ದರು, ಈ ಬಾರಿಯ ಚುನಾವಣೆಯಲ್ಲಿ 15,76,264 ಮಂದಿ ಮತದಾನ ಅರ್ಹತೆ ಪಡೆದಿದ್ದಾರೆ.

ಹಿಂದಿನ ಚುನಾವಣೆಯಲ್ಲಿ 7, 38, 503 ಪುರುಷ ಮತದಾರರಿದ್ದರು, ಅವರ ಸಂಖ್ಯೆ ಪ್ರಸ್ತುತ 7, 64, 246ಕ್ಕೆ ಏರಿದ್ದು, 25, 743 (ಶೇ 3.48) ಪುರುಷ ಮತದಾರರ ಸೇರ್ಪಡೆಯಾಗಿದೆ.

ಹಿಂದಿನ ಚುನಾವಣೆಯಲ್ಲಿ 7,77,464 ಮಹಿಳಾ ಮತದಾರರಿದ್ದು, ಅವರ ಸಂಖ್ಯೆಯೂ 8,11,981ಕ್ಕೇರಿದ್ದು, 34,517 (ಶೇ 4.43) ಮಹಿಳಾ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ್ದಾರೆ.

ತೃತೀಯಲಿಂಗಿಗಳ ಇಳಿಕೆ: ಆದರೆ ಈ ಕ್ಷೇತ್ರದಲ್ಲಿ ಒಟ್ಟು ತೃತೀಯಲಿಂಗ ಮತದಾರರ ಸಂಖ್ಯೆ ಇಳಿಕೆಯಾಗಿದೆ. 2019ರಲ್ಲಿ 54 ತೃತೀಯ ಲಿಂಗ ಮತದಾರರಿದ್ದರು, ಈ ಬಾರಿ ಅದು 37ಕ್ಕೆ ಇಳಿದಿದೆ. ಅತೀ ಹೆಚ್ಚು 20 ಮಂದಿ ತೃತೀಯ ಲಿಂಗಿಗಳು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿದ್ದರೇ, ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಈ ಮತದಾರರೇ ಇಲ್ಲ.

4 ಹೊಸ ಮತಗಟ್ಟೆಗಳು: ಮತದಾರರ ಹೆಚ್ಚಳಕ್ಕನುಗುಣವಾಗಿ ಒಟ್ಟು 5 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. ಉಡುಪಿಯಲ್ಲಿ ಒಂದು ಹೆಚ್ಚುವರಿ ಮತಗಟ್ಟೆ ಸೇರಿ 866 ಮತ್ತು ಚಿಕ್ಕಮಗಳೂರಿನಲ್ಲಿ 4 ಹೆಚ್ಚುವರಿ ಮತಗಟ್ಟೆಗಳು ಸೇರಿ 972 ಮತಗಟ್ಟೆಗಳಿವೆ. ಒಟ್ಟು ಕ್ಷೇತ್ರದಲ್ಲಿ 1842 ಮತಗಟ್ಟೆಗಳಿವೆ.

ಹಿರಿಯರಿಗೆ ಮನೆಯಿಂದಲೇ ಮತದಾನದ ಅವಕಾಶ: ಈ ಬಾರಿ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂತಹವರು ನಮೂನೆ 12 ಡಿ ಮೂಲಕ ಕೋರಿಕೆ ಸಲ್ಲಿಸಬೇಕು.

ಸಂಬಂಧಪಟ್ಟ ಚುನಾವಣಾಧಿಕಾರಿಗಳು ಅವರ ಮನೆಗೆ ಹೋಗಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಾರೆ, ಒಂದು ಬಾರಿ ಮತದಾರರು ಲಭ್ಯರಿಲ್ಲದಿದ್ದರೆ ಇನ್ನೊಮ್ಮೆ ಅಧಿಕಾರಿಗಳು ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಕೊಡುತ್ತಾರೆ. ಆಗಲೂ ಅವರು ಲಭ್ಯರಿಲ್ಲದಿದ್ದರೆ ಮತ್ತೆ (ಮತಗಟ್ಟೆಯಲ್ಲಿಯೂ) ಅವರಿಗೆ ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಈ ಕ್ಷೇತ್ರದ ಚುನಾವಣಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.