ಉಡುಪಿ: ಚರ್ಚ್‌ಗಳಲ್ಲಿ ಪೂಜೆ, ಪ್ರಾರ್ಥನೆಯೊಂದಿಗೆ ಹೊಸ ವರ್ಷ ಸ್ವಾಗತಿಸಿದ ಕ್ರೈಸ್ತರು

| Published : Jan 01 2025, 12:02 AM IST

ಉಡುಪಿ: ಚರ್ಚ್‌ಗಳಲ್ಲಿ ಪೂಜೆ, ಪ್ರಾರ್ಥನೆಯೊಂದಿಗೆ ಹೊಸ ವರ್ಷ ಸ್ವಾಗತಿಸಿದ ಕ್ರೈಸ್ತರು
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು. ಮಂಗಳವಾರ ಸಂಜೆ ವೇಳೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು, ಕಳೆದ 2024ರ ವರ್ಷದಲ್ಲಿ ಸರ್ವರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದೊರಂದಿಗೆ ನೂತನ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನೂತನ 2025ರ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು. ಮಂಗಳವಾರ ಸಂಜೆ ವೇಳೆ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು, ಕಳೆದ 2024ರ ವರ್ಷದಲ್ಲಿ ಸರ್ವರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದೊರಂದಿಗೆ ನೂತನ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಮಂಗಳವಾರ ರಾತ್ರಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡುವುದರೊಂದಿಗೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದರು.ಪವಿತ್ರ ಬಲಿಪೂಜೆಯ ಮುಂಚಿತವಾಗಿ ಕಳೆದು ಹೋಗಲಿರುವ 2024ನೇ ವರ್ಷದಲ್ಲಿ ದೇವರು ಮಾಡಿದ ಎಲ್ಲ ರೀತಿಯ ಕೃಪಾವರಗಳಿಗೆ ದೇವರಿಗೆ ವಂದನೆಗಳನ್ನು ಅರ್ಪಿಸಿ, ಪರಮ ಪ್ರಸಾದದ ವಿಶೇಷ ಆರಾಧನೆಯನ್ನು ನಡೆಸುವುದರೊಂದಿಗೆ 2025ರಲ್ಲಿ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಪ್ರಧಾನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರುಗಳಾದ ಪ್ರದೀಪ್ ಕಾರ್ಡೋಜಾ, ಡಾ.ಜೆನ್ಸಿಲ್ ಆಲ್ವಾ ಹಾಗೂ ಇತರ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.ಜಿಲ್ಲೆಯ ಪ್ರಮುಖದ ಚರ್ಚುಗಳಲ್ಲಿಯೂ ಹೊಸ ವರ್ಷ ಆಚರಣೆಯ ಪ್ರಯುಕ್ತ ಬಲಿಪೂಜೆಗಳು ನಡೆದವು. ಹೊಸ ವರ್ಷಾಚರಣೆ ಸ್ವಾಗತಿಸುವ ಅಂಗವಾಗಿ ಚರ್ಚ್‌ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.