ಉಡುಪಿಯಲ್ಲಿ ಶುಕ್ರವಾರ ನಡೆಯಲಿರುವ ವಿಶ್ವದಾಖಲೆಯ ಗೀತಾ ಪಾರಾಯಣದ ನಾಯಕತ್ವವನ್ನು ಸ್ವತಃ ವಿಶ್ವನಾಯಕನೆಂದು ಕರೆಯಲ್ಪಡುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸುತ್ತಿರುವುದು ಕೂಡ ಒಂದು ದಾಖಲೆಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ.
ಉಡುಪಿ: ಇಂದು ಉಡುಪಿಯ ಭಗವದ್ಗೀತೆ ಭಕ್ತರಿಗೆಲ್ಲಾ ಜೀವಮಾನದಲ್ಲಿಯೇ ಮರೆಯಲಾಗದ ದಿನ, ಒಂದೆಡೆ ತಮ್ಮ 2 ವರ್ಷಗಳ ಪರ್ಯಾಯೋತ್ಸವವನ್ನೇ ವಿಶ್ವ ಗೀತಾ ಉತ್ಸವವನ್ನಾಗಿ ಆಚರಿಸಿದ ಪುತ್ತಿಗೆ ಮಠಾಧೀಶರು ಆಯೋಜಿಸಿರುವ ಲಕ್ಷ ಮಂದಿ ಒಂಡೆದೆ ಸೇರಿ ಗೀತೆಯನ್ನು ಪಠಿಸುವ ವಿಶ್ವದಾಖಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ, ಜೊತೆಗೆ ತಮ್ಮ ಜೀವನದಲ್ಲಿ ಗೀತೆಯನ್ನು ಅನುಸರಿಸುತ್ತಿರುವ ವಿಶ್ವನಾಯಕನ ಜೊತೆ ಗೀತೆಯನ್ನು ಪಠಿಸುವ ಅವಕಾಶ, ಈ ಪುಣ್ಯದಿನ ಗೀತಾಭಕ್ತರಲ್ಲಿ ರೋಮಾಂಚನಕ್ಕೆ ಕಾರಣವಾಗುತ್ತಿದೆ.ವಿಶ್ವದುದ್ದಕ್ಕೂ ಗೀತೆಯ ಪ್ರಚಾರ - ಪ್ರಸಾರ ಮಾಡುವ ಮೂಲಕ ಒಂದು ಮೌನ ಕ್ರಾಂತಿಯನ್ನೇ ಮಾಡಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಈ ಚತುರ್ಥ ಪರ್ಯಾಯೋತ್ಸವವನ್ನು ಗೀತೆಯ ಆರಾಧನೆ - ಬೋಧನೆಗೆ ಮೀಸಲಿಟ್ಟಿದ್ದಾರೆ. ಗೀತಾರಾಧನೆಯ ಪುಣ್ಯ ತಮಗೆ ಮಾತ್ರವಲ್ಲ, ಎಲ್ಲಾ ಭಕ್ತರಿಗೂ ಲಭಿಸಬೇಕು ಎನ್ನುವ ಉದ್ದೇಶದಿಂದ ಕೋಟಿ ಕೈಗಳಿಂದ ಗೀತೆಯನ್ನು ಬರೆಸುವ ಮಹತ್‌ಯಜ್ಞೋಪಾದಿ ಯೋಜನೆ ಯಶಸ್ವಿಗೊಳಿಸಿದ್ದಾರೆ, ಕೋಟ್ಯಾಂತರ ಅಬಾಲವೃದ್ಧರಾದಿ ಜನರಲ್ಲಿ ಕೃಷ್ಣ ಪ್ರಜ್ಞೆಯನ್ನು ಬೀಜ ಬಿತ್ತಿದ್ದಾರೆ, ಇದು ಭವಿಷ್ಯತ್ತಿನಲ್ಲಿ ಹೆಮ್ಮರವಾಗಿ ಬೆಳೆದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತಿದೆ.ಅತ್ಯಂತ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತಿರುವ ಪುತ್ತಿಗೆ ಶ್ರೀಗಳ ಪರ್ಯಾಯವು ಎರಡು ವಿಶ್ವದಾಖಲೆಗೆ ಸಾಕ್ಷಿಯಾಗುತ್ತಿದೆ.ಏಕಕಾಲದಲ್ಲಿ ದಿನಕ್ಕೊಂದು ಶ್ಲೋಕದಂತೆ ಗೀತೆಯ 700 ಶ್ಲೋಕಗಳನ್ನು 1 ಕೋಟಿಗೂ ಅಧಿಕ ಮಂದಿ ಬರೆದು ಕೃಷ್ಣನಿಗೆ ಸಮರ್ಪಿಸಿದ್ದು ಇತಿಹಾಸದಲ್ಲಿ ಇದುವರೆಗೆ ನಡೆದಿಲ್ಲ, ಇದೊಂದು ವಿಶ್ವದಾಖಲೆಯಾಗಿದೆ.
ಇದರ ಜೊತೆಗೆ ಇಂದು ಏಕಕಾಲದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಂಪೂರ್ಣ ಭಗವದ್ಗೀತೆಯನ್ನು ಒಂದೇ ಸ್ಥಳದಲ್ಲಿ ಪಠಣ ಮಾಡುತ್ತಾರೆ, ಇದು ಕೂಡ ವಿಶ್ವದಾಖಲೆಯಾಗುತ್ತಿದೆ.ಈ ವಿಶ್ವದಾಖಲೆಯ ನಾಯಕತ್ವವನ್ನು ಸ್ವತಃ ವಿಶ್ವನಾಯಕನೆಂದು ಕರೆಯಲ್ಪಡುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸುತ್ತಿರುವುದು ಕೂಡ ಒಂದು ದಾಖಲೆಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ.ದೀಕ್ಷಾ ಸುವರ್ಣ ವರ್ಷಾಚರಣೆ, ಸುವರ್ಣ ಮಂಟಪ ಸಮರ್ಪಣೆಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ 50 ವರ್ಷಗಳಾಗುತ್ತಿವೆ, ತಮ್ಮನ್ನು ಗೀತಾಚಾರ್ಯ ಶ್ರೀ ಕೃಷ್ಣನ ಸೇವೆಗೆ ತೊಡಗಿಸಿಕೊಂಡು ಸುವರ್ಣ ವರ್ಷಾಚರಣೆಯ ನೆನಪಿಗಾಗಿ ಶ್ರೀಗಳು ಕೃಷ್ಣಮಠದ ತೀರ್ಥ ಮಂಟಪಕ್ಕೆ ಹೊಸ ವೈಭವವನ್ನು ನೀಡಿದ್ದಾರೆ. ತಮ್ಮ ಅಭಿಮಾನಿ ಭಕ್ತರ ಸಹಕಾರದಿಂದ ಸುಮಾರು 3 ಕೋಟಿ ರು. ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಚಿನ್ನವನ್ನು ಹೊದಿಸಿದ್ದಾರೆ. ಇದನ್ನು ಇಂದು ಪ್ರಧಾನಿ ಮೋದಿ ಶ್ರೀ ಕೃಷ್ಣನಿಗೆ ಅರ್ಪಿಸಲಿದ್ದಾರೆ.
ಕೃಷ್ಣನಿಗೆ ಪಾರ್ಥಸಾರಥಿ ರಥ
ಪುತ್ತಿಗೆ ಶ್ರೀಗಳು ತಮ್ಮ ಪರ್ಯಾಯೋತ್ಸವದ ಆರಂಭದಲ್ಲಿ ಸಂಕಲ್ಪಿಸಿದ್ದ ಇನ್ನೊಂದು ಯೋಜನೆ ಕನಕಪ್ರಿಯ ಕೃಷ್ಣನಿಗೆ ಕನಕ (ಚಿನ್ನ) ರಥದ ಸಮರ್ಪಣೆ, ಕೃಷ್ಣಮಠದೊಳಗೆ ಎಳೆಯಲು ಸಾಧ್ಯವಾಗುವಂತಹ ಈ ಚಿನ್ನದ ಪಾರ್ಥಸಾರಥಿ ರಥವು ನಿರ್ಮಾಣಗೊಳ್ಳುತ್ತಿದ್ದು, ಇದನ್ನು ಡಿ. 27ರಂದು ಬಾಲಕೃಷ್ಣನಿಗೆ ಶ್ರೀಗಳು ಸಮರ್ಪಿಸಲಿದ್ದಾರೆ. ತಮ್ಮ ಮೂರನೇ ಪರ್ಯಾಯೋತ್ಸವದ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ಕೃಷ್ಣನಿಗೆ ನವರತ್ನ ರಥವನ್ನು ಸಮರ್ಪಿಸಿದ್ದರು, ಇಂದು ವಿಶೇಷ ದಿನಗಳಲ್ಲಿ ರಥಬೀದಿಯಲ್ಲಿ ಕೃಷ್ಣನಿಗೆ ಇದೇ ರಥದಲ್ಲಿ ಉತ್ಸವ ನಡೆಯುತ್ತಿದೆ.ಕನಕನ ಕಿಂಡಿಗೆ ಚಿನ್ನದ ಹೊದಿಕೆಭಕ್ತ ಕನಕದಾಸನಿಗೆ ದರ್ಶನ ನೀಡಿದ ಐತಿಹಾಸಿಕ ಕನಕನ ಕಿಂಡಿಗೆ, ಕೃಷ್ಣಮಠದ ಪರಮಭಕ್ತರಾದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಚಿನ್ನದ ಹೊದಿಕೆ ನಿರ್ಮಿಸಿ ಕೃಷ್ಣನಿಗೆ ಅರ್ಪಿಸಿದ್ದಾರೆ. ಇದನ್ನು ಕೂಡ ಶುಕ್ರವಾರ ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. 60 ವರ್ಷಗಳ ಹಿಂದೆ ಪ್ರಮೋದ್ ಅವರ ತಂದೆ ಮಲ್ಪೆ ಮಧ್ವರಾಜ್ ಅವರು ರಥಬೀದಿಯಲ್ಲಿ ಕನಕದಾಸನ ಕಲ್ಲಿನ ಪ್ರತಿಮೆ ಮತ್ತು ಗುಡಿಯನ್ನು ಸ್ಥಾಪಿಸಿದ್ದರು. ಇದು ತಮ್ಮ ಕುಟುಂಬಕ್ಕೆ ಸಿಕ್ಕಿದ ಮಹಾಭಾಗ್ಯ ಎಂದು ಪ್ರಮೋದ್ ಸಂತಸ ವ್ಯಕ್ತಪಡಿಸಿದ್ದಾರೆ.ಅಂದು ಸಿಎಂ - ಇಂದು ಪಿಎಂ
ನರೇಂದ್ರ ಮೋದಿ ಅವರು ಅನೇಕ ಬಾರಿ ಉಡುಪಿಗೆ ಬಂದಿದ್ದಾರೆ. ಆದರೆ ಪುತ್ತಿಗೆ ಶ್ರೀಗಳ ಈ ಪರ್ಯಾಯೋತ್ಸವದ ಸಂದರ್ಭದಲ್ಲಿ, ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಥಮ ಬಾರಿಗೆ ಇಂದು ಶ್ರೀಕೃಷ್ಣನ ದರ್ಶನಕ್ಕೆ ಬರುತ್ತಿದ್ದಾರೆ. ಸರಿಯಾಗಿ 15 ವರ್ಷಗಳ ಹಿಂದೆ ಮೋದಿ ಅವರು ಶ್ರೀ ಕೃಷ್ಣನ ದರ್ಶನಕ್ಕೆ ಬಂದಿದ್ದರು, ಆಗ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದರು. ಆಗಲೂ ಪುತ್ತಿಗೆ ಶ್ರೀಗಳ ತೃತೀಯ ಪರ್ಯಾಯೋತ್ಸವ ನಡೆಯುತ್ತಿತ್ತು.