ಉಡುಪಿ: ಮುಂದುವರಿದ ಮಳ‍ೆ, ಹಾನಿ

| Published : Jul 16 2024, 12:34 AM IST

ಸಾರಾಂಶ

ಹವಾಮಾನ ಇಲಾಖೆ ಕೂಡ ಜು.18ರ ವರೆಗೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಮನ್ಸೂಚನೆ ನೀಡಿದೆ. ಅದರಂತೆ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದೆರಡು ದಿನಗಳಿಂದ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದೆ. ಸೋಮವಾರವೂ ದಿನವಿಡೀ ಮಳೆಯಾಗಿದ್ದು, ತಗ್ಗು ಪ್ರದೇಶಗಳ ಜನರು ಪ್ರವಾಹದ ಭೀತಿಯನ್ನೆದುರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ಕೂಡ ಜು.18ರ ವರೆಗೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಮನ್ಸೂಚನೆ ನೀಡಿದೆ. ಅದರಂತೆ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ.

ಭಾನುವಾರ ರಾತ್ರಿಯ ಮಳೆಗೆ ಕುಂದಾಪುರ ತಾಲೂಕಿನಾದ್ಯಂತ ಸಾಕಷ್ಟು ಮನೆ, ಬೆಳೆಗಳಿಗೆ ಹಾನಿ ಸಂಭವಿಸಿದೆ. ಇಲ್ಲಿನ 17 ಮನೆಗಳಿಗೆ, 2 ಜಾನುವಾರು ಕೊಟ್ಟಿಗೆ, 2 ತೋಟ ಮತ್ತು ಉಡುಪಿಯ ಒಂದು ಶಾಲೆಗೆ ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಗೀತಾ ಎಂಬವರ ಮನೆ ಗಾಳಿ ಮಳೆಗೆ ಬಹುತೇಕ ಹಾನಿಗೊಂಡಿದ್ದು, ಅವರಿಗೆ ಸುಮಾರು 1,50,000 ರು.ಗಳಷ್ಟು ನಷ್ಟವನ್ನು ಅಂದಾಜಿಸಲಾಗಿದೆ. ಇದೇ ಗ್ರಾಮದ ಕೃಷ್ಣಾನಂದ ಅವರ ಮನೆಗೆ 70,000 ರು., ಜಪ್ತಿ ಗ್ರಾಮದ ಪ್ರೇಮ ಅವರ ವಾಸದ ಮನೆಯ ಮೇಲೆ ಮರ ಬಿದ್ದು 40,000 ರು., ಅನಗಳ್ಳಿ ಗ್ರಾಮದ ಸಂತೋಷ್ ಶೆಟ್ಟಿ ಅವರ ಮನೆಗೆ 95,000 ರು., ಕಂದಾವರ ಗ್ರಾಮದ ಸುಬ್ರಾಯ ಪುರಾಣಿಕರ ಮನೆಯ ಮೇಲೆ ಮರ ಬಿದ್ದು 40,000 ರು., ಪಾರ್ವತಿ ಬಾಬು ಅವರ ಮನೆಯ ಮೇಲೆ ಮರ ಬಿದ್ದು 50,000ರು., ಸಂತೋಷ್ ಮೊಗವೀರ ಅವರ ಮನೆ 60,000 ರು., ಶಂಕರನಾರಾಯಣ ಗ್ರಾಮದ ಶ್ರೀಪ್ರಭಾ ನಾಯ್ಕ ಅವರ ಮನೆಗೆ 20,000 ರು., ಆಲೂರು ಗ್ರಾಮದ ಸೀತು ಚಂದ್ರ ದೇವಾಡಿಗ ಅವರ ಮನೆಗೆ 30,000, ಗುಲಾಬಿ ವಿಷ್ಣು ಅವರ ಮನೆಗೆ 35,000 ರು., ಜಲಜ ಸುಬ್ಬ ಅವರ ಮನೆಗೆ 30,000 ರು., ಕುಸುಮ ಪೂಜಾರಿಅವರ ಮನೆಗೆ 30,000 ರು. ಗಳಷ್ಟು, ರಟ್ಟಾಡಿ ಗ್ರಾಮದ ಅಪ್ಪು ನರಸಿಂಹ ಅವರ ಮನೆಗೆ 75,000 ರು., ಕಾಲ್ತೋಡು ಗ್ರಾಮದ ಮಂಜು ಪೂಜಾರಿಅವರ ಮನೆಗೆ 24,000, ಉಪ್ಪುಂದ ಗ್ರಾಮದ ಕೃಷ್ಣಿ ದೇವಾಡಿಗ ಅವರ ಮನೆಯ ಮೇಲೆ ಮರ ಬಿದ್ದು 35,000 ರು., ಬಿಜೂರು ಗ್ರಾಮದ ಹನುಮಂತ ಅವರ ಮನೆಗೆ 1,00,000 ರು. ನಷ್ಟ ಉಂಟಾಗಿದೆ.

ಇಲ್ಲಿನ ಕೋಣಿ ಗ್ರಾಮದ ಗಣಪತಿ ನಾಯಕ್ ಅವರ ಬಾಳೆಯ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿ 40,000 ರು., ಸಿದ್ದಾಪುರ ಮಮತ ಶೆಟ್ಟಿ ಅವರ ತೋಟಗಾರಿಕಾ ಬೆಳೆಗೆ 5,000 ರು.ಗಳ ನಷ್ಟ ಸಂಭವಿಸಿದೆ.

ಆಲೂರು ಗ್ರಾಮದ ಸುಶೀಲಾ ಆನಂದ ಅವರ ಜಾನುವಾರು ಕೊಟ್ಟಿಗೆಗೆ 20,000 ರು. ಮತ್ತು ಕೋಣಿ ಗ್ರಾಮದ ಪಾರ್ವತಿ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆ ಮಳೆಯಿಂದ ಸುಮಾರು 6,000 ರು. ನಷ್ಟ ಉಂಟಾಗಿದೆ.* ಶಾಲೆಯ ಬಿಸಿಯೂಟ ಕೋಣೆ ಗೋಡೆ ಕುಸಿತ

ಉಡುಪಿಯ ದೊಡ್ಡಣಗುಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೋಣೆಯ ಗೋಡೆ ಮಳೆಗೆ ಕುಸಿದುಬಿದ್ದಿದೆ. ರಾತ್ರಿ ಈ ಘಟನೆ ಸಂಭವಿಸಿದ್ದರಿಂದ ಇಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸುಮಾರು 25,000 ರು.ಗೂ ಹೆಚ್ಚು ನಷ್ಟವನ್ನು ಅಂದಾಜಿಸಲಾಗಿದೆ.

ಸೋಮವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 83 ಮಿ.ಮೀ. ಮಳೆಯಾಗಿದೆ. ಅದರಲ್ಲಿ ತಾಲೂಕುವಾರು ಕಾರ್ಕಳ 89.10, ಕುಂದಾಪುರ 60.60, ಉಡುಪಿ 82.40, ಬೈಂದೂರು 65.50, ಬ್ರಹ್ಮಾವರ 74.30, ಕಾಪು 78.70, ಹೆಬ್ರಿ 83 ಮಿ.ಮೀ. ಮಳೆ ಆಗಿರುತ್ತದೆ.