ಡಿ.13ರಂದು ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.
ಉಡುಪಿ: ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ, ಸಾರ್ವಜನಿಕರಿಗೆ ಮನರಂಜನೆ ಮತ್ತು ಉತ್ತಮ ಸಂದೇಶ ನೀಡುವ ಆಶಯದಿಂದ 20 ವರ್ಷಗಳ ಹಿಂದೆ ಆರಂಭಿಸಲಾಗಿರುವ ಆಳ್ವಾಸ್ ವಿರಾಸತ್ ಕೇವಲ ಮೂಡುಬಿದಿರೆಗೆ ಸೀಮಿತಗೊಳಿಸದೇ ರಾಜ್ಯದ ಇತರ ಜಿಲ್ಲೆಗಳಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಎಂದು ಪ್ರದರ್ಶಿಸಲಾಗುತ್ತಿದೆ. ಡಿ.13ರಂದು ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.
ಅವರು ಉಡುಪಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ವಿವರಗಳನ್ನು ನೀಡಿದರು.2012 ರಲ್ಲಿ ಆಳ್ವಾಸ್ ವಿಶ್ವ ನುಡಿ - ವಿರಾಸತ್ ನಲ್ಲಿ ೮೮ ತಂಡಗಳ ಮೂಲಕ ವಿವಿಧೆಡೆ ಈ ಪ್ರದರ್ಶನ ನೀಡಲಾಗಿತ್ತು. ಈ ಬಾರಿ ಮೂಡುಬಿದಿರೆಯನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಪ್ರದರ್ಶನ ಆಯೋಜಿಸಲಾಗುತ್ತಿದೆ. ಈಗಾಗಲೇ ಪುತ್ತೂರು ಮತ್ತು ಕಾರ್ಕಳದಲ್ಲಿ ಪ್ರದರ್ಶನ ನಡೆಸಲಾಗಿದ್ದು, ಇದೀಗ ಪರ‍್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಕೃಷ್ಣ ಮಠ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸುವ ಬೃಹತ್ ವೇದಿಕೆಯಲ್ಲಿ ಕಾರ‍್ಯಕ್ರಮ ಆಯೋಜಿಸಲಾಗುವುದು ಎಂದರು.ಒಟ್ಟು 3 ಗಂಟೆಗಳ ಪ್ರದರ್ಶನದಲ್ಲಿ, ಮೊದಲ ೪೫ ನಿಮಿಷಗಳ ಸಭೆ, ಬಳಿಕ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ. ೧೦ ಸಾವಿರ ಮಂದಿ ಪ್ರೇಕ್ಷಕರ ನಿರೀಕ್ಷೆ ಇದ್ದು, ಸಮಯ ಪಾಲನೆ ಮತ್ತು ಶಿಸ್ತಿಗೆ ಆದ್ಯತೆ ನೀಡಲಾಗುತ್ತಿದೆ. ವೇದಿಕೆ ನಿರ್ಮಾಣ, ಧ್ವನಿ- ಬೆಳಕು, ಕರ‍್ಯಕ್ರಮ ನಿರ್ವಹಣೆ ಇತ್ಯಾದಿಗಳಲ್ಲಿ ಅನುಸರಿಸಿಕೊಂಡು ಬಂದ ಕ್ರಮಬದ್ಧತೆಗೆ ಆದ್ಯತೆ ನೀಡಲಾಗುವುದು ಎಂದರು.
ಶಾಸಕ ಯಶಪಾಲ್ ಸುವರ್ಣ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಪ್ರಮೋದ್ ಶೆಟ್ಟಿ, ಸಾಂಸ್ಕೃತಿಕ ಸಂಘಚಕರಾದ ಬೈಕಾಡಿ ಸುಪ್ರಸಾದ ಶೆಟ್ಟಿ, ದಾಮೋದರ ಶರ್ಮ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಡಾ.ಕಿರಣ್ ಆಚಾರ್ಯ, ಕೆ.ವಿ.ರಮಣ್ ಮೊದಲಾದವರಿದ್ದರು.ಆಳ್ವಾಸ್ ವಿರಾಸತ್ ಉಡುಪಿ ಘಟಕ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಕಾರ್ಯದರ್ಶಿ ಭುವನಪ್ರಸಾದ್ ಹೆಗ್ಡೆ ವಂದಿಸಿದರು. ಆಳ್ವಾಸ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಇದ್ದರು.
ಪೇಜಾವರ ಶ್ರೀ ವೇದಿಕೆ, ಆಚಾರ್ಯರಿಗೆ ಸಮರ್ಪಣೆಉಡುಪಿಯ ಕಾರ್ಯಕ್ರಮದ ವೇದಿಕೆಗೆ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹೆಸರು ಇಡಲಾಗುವುದು ಹಾಗೂ ಈ ಸಾಂಸ್ಕೃತಿಕ ವಭವವು ಮಾಜಿ ಸಚಿವ ಡಾ.ವಿ.ಎಸ್. ಆಚಾರ‍್ಯ ಅವರಿಗೆ ಅರ್ಪಣೆಯಾಗಲಿದೆ. ಆ ಮೂಲಕ ಉಡುಪಿಯ ಎರಡು ಹಿರಿಯ ಚೇತನಗಳನ್ನು ಸ್ಮರಿಸಲಾಗುವುದು ಎಂದು ಡಾ. ಆಳ್ವ ತಿಳಿಸಿದರು.