ಉಡುಪಿ ಧರ್ಮಪ್ರಾಂತ್ಯ ವಾರ್ಷಿಕ ಪರಮಪ್ರಸಾದ ಮೆರವಣಿಗೆ

| Published : Nov 24 2025, 03:15 AM IST

ಸಾರಾಂಶ

ಕಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಭಕ್ತಿಶ್ರದ್ಧೆಯಿಂದ ಸಂಪನ್ನಗೊಂಡಿತು.

ಉಡುಪಿ: ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಭಕ್ತಿಶ್ರದ್ಧೆಯಿಂದ ಸಂಪನ್ನಗೊಂಡಿತು.

ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ನಮ್ಮ ಪ್ರೀತಿ ತೋರಿಕೆಯಾಗಿರದೆ ಅದನ್ನು ಕಾರ್ಯದಲ್ಲಿ ಮಾಡಿ ತೋರಿಸಬೇಕು. ಪ್ರೀತಿ ಮತ್ತು ಸೇವೆ ಕ್ರೈಸ್ತ ಧರ್ಮದ ಮೂಲ ತತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು ಎಂದರು ಕರೆ ನೀಡಿದರು.

ಧರ್ಮಗುರು ವಿಲ್ಸನ್ ಡಿಸೋಜ ಪರಮ ಪ್ರಸಾದ ಆರಾಧನೆ ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ಅಲಂಕರಿಸಿದ ತೆರೆದ ವಾಹನದಲ್ಲಿ ವಾದ್ಯಸಂಗೀತಗಳೊಂದಿಗೆ ಮೆರವಣಿಗೆಯಲ್ಲಿ ಒಯ್ದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್‌ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆ ನಡೆಸಲಾಯಿತು. ಮೌಂಟ್ ರೋಜರಿ ದೇವಾಲಯದ ಸಭಾಂಗಣದಲ್ಲಿ ಮಿಲಾಗ್ರಿಸ್ ಕಾಥೆಡ್ರಲ್ ಸಹಾಯಕ ಗುರು ವಂ. ಫಾ. ಪ್ರದೀಪ್ ಕಾರ್ಡೋಜ ದೈವವಾಕ್ಯದ ಪ್ರಬೋಧನೆ ನೀಡಿದರು. ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕ ವಂ. ವಿಲ್ಸನ್ ಡಿಸೋಜ ಮತ್ತು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ.ಡಾ. ರೋಕ್ ಡಿಸೋಜ ದೈವಾರಾಧನಾ ವಿಧಿ ನಿರೂಪಿಸಿದರು. ರೊನಾಲ್ಡ್ ಸಲ್ಡಾನಾ ಧನ್ಯವಾದ ಸಲ್ಲಿಸಿದರು.

ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ವಿವಿಧ ಚರ್ಚ್‌ಗಳಿಂದ ಸುಮಾರು 3000ಕ್ಕೂ ಅಧಿಕ ಭಕ್ತರು, 60ಕ್ಕೂ ಅಧಿಕ ಧರ್ಮ ಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು.ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಸ್ಟೀಫನ್ ಡಿಸೋಜಾ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ.ಡಾ.ಲೆಸ್ಲಿ ಡಿಸೋಜ, ವಂ.ಆಲ್ಬನ್ ಡಿಸೋಜಾ, ವಂ.ಚಾರ್ಲ್ಸ್ ಮಿನೇಜಸ್, ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.