ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಕಾರ್ಯಕ್ರಮ
ಉಡುಪಿ: ಕಾಯಕದ ಮಹತ್ವವನ್ನು ತಿಳಿಸಿದ ಶಿವಯೋಗಿ ಸಿದ್ದರಾಮರ ತತ್ವ ಆದರ್ಶಗಳನ್ನು ಭೋವಿ ಸಮಾಜದವರು ಸೇರಿದಂತೆ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.12ನೇ ಶತಮಾನದ ಪ್ರಮುಖ ಪಂಚ ಶಿವಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ಧರಾಮ ಅವರು ಮಾನವರೆಲ್ಲರೂ ಸಮಾನರು ಎಂಬ ಪರಿಕಲ್ಪನೆಯಲ್ಲಿ ವಚನ ಸಾಹಿತ್ಯವನ್ನು ರಚಿಸಿ ಸಮುದಾಯದ ನಾಯಕರಾದರು. ವಚನ ಸಾಹಿತ್ಯ ಚಳುವಳಿಯಲ್ಲಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸವನ್ನು ತಮ್ಮ ವಚನಗಳ ಮೂಲಕ ಮಾಡಿದರು ಎಂದರು.ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ರಾಜ್ ಕುಮಾರ್ ಪೆರ್ಣಂಕಿಲ ಮಾತನಾಡಿ, ಶಿವಯೋಗಿ ಸಿದ್ಧರಾಮ ಅವರನ್ನು ಭೋವಿ ಜನಾಂಗದವರು ತಮ್ಮ ಕುಲಗುರುಗಳಾಗಿ ಸ್ವೀಕರಿಸಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಸಮಾಜದ ಪ್ರತಿಯೊಬ್ಬರೂ ನಡೆಯಬೇಕು ಎಂದರು.
ಉಡುಪಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಜಗದೀಶ ಪರ್ಕಳ ಉಪನ್ಯಾಸ ನೀಡಿದರು.ಇದೇ ಸಂದರ್ಭ ನಿವೃತ್ತ ಭಾರತೀಯ ಸೇನೆಯ ವಿಶ್ವನಾಥ ಪೆರ್ಡೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯದ ವ್ಯವಸ್ಥಾಪಕ ಶಂಕರ್, ಭೋವಿ ಸಮುದಾಯದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕ ರಾಮಾಂಜಿ ನಿರೂಪಿಸಿ, ವರ್ಷಾ ಬಿ. ಕೋಟ್ಯಾನ್ ವಂದಿಸಿದರು.