ಸಾರಾಂಶ
ಶುಕ್ರವಾರ ಹಗಲು ಮತ್ತು ರಾತ್ರಿ ಗಾಳಿ ಮಳೆಗೆ ಜಿಲ್ಲೆಯಲ್ಲಿ ಮತ್ತೆ 67 ಮನೆ ಮತ್ತು 12 ಜಾನುವಾರು ಕೊಟ್ಟಿಗೆಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. 9 ಕೃಷಿಕರ ತೋಟಗಳಿಗೂ ಹಾನಿಯಾಗಿದೆ. ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಯ ಆರ್ಭಟ ಜೋರಾಗಿದ್ದು, ಇಲ್ಲಿನ 29 ಮನೆಗಳಿಗೆ ಹಾನಿಯಾಗಿ ಒಟ್ಟು 6.37 ಲಕ್ಷ ರು.ಗಳಷ್ಟು ನಷ್ಟವಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಮತ್ತೆ ಮಳೆ ಕ್ಷೀಣವಾಗಿದೆ. ಶನಿವಾರ ಎರಡು ಬಾರಿ ಸಾಧಾರಣ ಮಳೆಯಾಗಿದೆ. ನಡುವೆ ಬಿಸಿಲು ಕೂಡ ಕಾಣಿಸಿಕೊಂಡಿತ್ತು. ಹವಾಮಾನ ಇಲಾಖೆ ಇನ್ನೆರಡು ದಿನ ಮಳೆ ಇಳಿಮುಖವಾಗುವ ಬಗ್ಗೆ ಮುನ್ಸೂಚನೆ ನೀಡಿದೆ.ಆದರೆ ಶುಕ್ರವಾರ ಹಗಲು ಮತ್ತು ರಾತ್ರಿ ಗಾಳಿ ಮಳೆಗೆ ಜಿಲ್ಲೆಯಲ್ಲಿ ಮತ್ತೆ 67 ಮನೆ ಮತ್ತು 12 ಜಾನುವಾರು ಕೊಟ್ಟಿಗೆಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. 9 ಕೃಷಿಕರ ತೋಟಗಳಿಗೂ ಹಾನಿಯಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಯ ಆರ್ಭಟ ಜೋರಾಗಿದ್ದು, ಇಲ್ಲಿನ 29 ಮನೆಗಳಿಗೆ ಹಾನಿಯಾಗಿ ಒಟ್ಟು 6.37 ಲಕ್ಷ ರು.ಗಳಷ್ಟು ನಷ್ಟವಾಗಿದೆ. ಉಳಿದಂತೆ ಕುಂದಾಪುರ ತಾಲೂಕಿನಲ್ಲಿ 24 ಮನೆಗಳಿಗೆ 5.22 ಲಕ್ಷ ರು., ಉಡುಪಿ ತಾಲೂಕಿನಲ್ಲಿ 8 ಮನೆಗಳಿಗೆ 1.25 ಲಕ್ಷ ರು. ಮತ್ತು ಕಾಪು ತಾಲೂಕಿನಲ್ಲಿ 7 ಮನೆಗಳಿಗೆ 3.55 ಲಕ್ಷ ರು. ಹಾನಿಯಾಗಿದೆ. ಕಾಪು ತಾಲೂಕಿನ ಶಿರ್ವ ಗ್ರಾಮದ ಪದ್ಮ ಮೂಲ್ಯ ಅವರ ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿ 2 ಲಕ್ಷ ರು.ಗೂ ಅಧಿಕ ನಷ್ಟ ಉಂಚಾಗಿದೆ.ಕುಂದಾಪುರ ತಾಲೂಕಿನ ಸಿದ್ಧಾಪುರ, ವಂಡ್ಸೆ, ಜಪ್ತಿ, ಅಜ್ರಿ ಗ್ರಾಮಗಳ 9 ಜಾನುವಾರು ಕೊಟ್ಟಿಗೆಗಳು ಗಾಳಿಗೆ ಹಾನಿಗೊಂಡಿದ್ದು 3.10 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ.
ಇದೇ ತಾಲೂಕಿನ ಕೂರ್ಗಿ, ಕಾವ್ರಾಡಿ, ಹೊಸೂರು, ಆಲೂರು, ವಂಡಾರು ಇತ್ಯಾದಿ ಗ್ರಾಮಗಳ 12 ಕೃಷಿಕರ ತೋಟಗಾರಿಕಾ ಬೆಳೆಗಳಿಗೆ ಸುಮಾರು 1.25 ಲಕ್ಷ ರು.ಗಳಷ್ಟು ಹಾನಿಯಾಗಿದೆ.ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಸರಾಸರಿ 61.30 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 68.30, ಕುಂದಾಪುರ 68, ಉಡುಪಿ 42.40, ಬೈಂದೂರು 47.20, ಬ್ರಹ್ಮಾವರ 49.60, ಕಾಪು 41.10, ಹೆಬ್ರಿ 87.20 ಮಿ.ಮೀ. ಮಳೆ ಆಗಿರುತ್ತದೆ.