ಸಾರಾಂಶ
ಉಡುಪಿ ಕಡಿಯಾಳಿಯಲ್ಲಿ ‘ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ’ ಎಂಬ ಸಂಸ್ಥೆ ಉದ್ಘಾಟನೆಗೊಂಡಿತು. ಕುಂದಾಪುರ ಕಲಾಕ್ಷೇತ್ರದ ಕಿಶೋರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸಂಗೀತ ಕಲೆಯು ಮನುಷ್ಯನ ಎಲ್ಲಾ ದುಃಖಗಳನ್ನು ದೊರ ಮಾಡುವ ಶಕ್ತಿ ಹೊಂದಿದೆ. ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿ, ನೆಮ್ಮದಿ ದೊರೆಯುತ್ತದೆ. ಕಲಾವಿದ ಬದುಕಿದರೇ ಕಲೆ ಉಳಿಯುತ್ತದೆ ಎಂದು ಕುಂದಾಪುರ ಕಲಾಕ್ಷೇತ್ರದ ಕಿಶೋರ್ ಹೇಳಿದರು.ಉಡುಪಿ ಕಡಿಯಾಳಿಯಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ‘ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ’ ಎಂಬ ಸಂಸ್ಥೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಸಂಗೀತ ವಿದ್ವಾನ್ ಗುರುದಾಸ್ ಶೆಣೈ ಮಾತನಾಡಿ, ಕಲೆಯ ಬೆಳವಣಿಗೆ ಆಧುನಿಕ ಶೈಲಿಯ ಸ್ಟುಡಿಯೋ ಅಗತ್ಯ ಎಂದರು. ಖ್ಯಾತ ಗಾಯಕರಾದ ರವೀಂದ್ರ ಪ್ರಭು ಮಾತನಾಡಿ, ನೂರಾರು ಯುವ ಪ್ರತಿಭೆಗಳು ಈ ಸಂಸ್ಥೆಯ ಮುಖಾಂತರ ಬೆಳೆದು ನಾಡಿಗೆ ಕೀರ್ತಿ ತರಲಿ ಶುಭ ಹಾರೈಸಿದರು.ಸಂಸ್ಥೆಯ ಸ್ಥಾಪಕರಾದ ಪ್ರಕಾಶ್ ಕಾಮತ್ ಮಾತನಾಡಿ, ಹತ್ತು ಸಮಾನ ಮನಸ್ಕರ ಸಹಕಾರದಿಂದ ಕಲೆಗೆ ಪ್ರೋತ್ಸಾಹ, ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇವೆ. ಇದರಲ್ಲಿ ಮಕ್ಕಳಿಗೆ ಸಂಗೀತದ ಜೊತೆಗೆ ತಬಲಾ, ಹಾರ್ಮೊನಿಯೋಮ್, ಗಿಟಾರ್, ಕೊಳಲು ಮುಂತಾದ ಸಂಗೀತ ಉಪಕರಣಗಳ ತರಬೇತಿಯನ್ನೂ ನೀಡಲಾಗುವುದು. ಪ್ರತಿವಾರ ಸಂಸ್ಥೆಯ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸ್ಥಳೀಯ ಕಲಾವಿದ ಸತೀಶ್ಚಂದ್ರ ಸ್ವಾಗತಿಸಿದರು. ಶಿಕ್ಷಕಿ ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಕಾಮತ್ ಅವರು ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ವಿದ್ವಾನ್ ಗುರುದಾಸ್ ಶೆಣೈ, ಹಿನ್ನೆಲೆ ಗಾಯಕ ರವೀಂದ್ರ ಪ್ರಭು, ದೇವಾನಂದ ಗಾಂವ್ಕರ್, ಶ್ರೀನಿವಾಸ ಭಾಗವತ್ ಮತ್ತು ರೋಹಿತ್ ಕಾಮತ್ ಅವರಿಂದ ‘ಭಜನಾಮೃತ’ ನೆರವೇರಿತು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು, ಸಂಗೀತ ಅಭಿಮಾನಿಗಳು ಉಪಸ್ಥಿತರಿದ್ದರು.