ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಕೂಲಿಕಾರರ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ, ರಸ್ತೆ ತಡೆ ನಡೆಸಿದ ರೈತ, ಕಾರ್ಮಿಕ, ಕೂಲಿಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಉಡುಪಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಕೂಲಿಕಾರರ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ, ರಸ್ತೆ ತಡೆ ನಡೆಸಿದ ರೈತ, ಕಾರ್ಮಿಕ, ಕೂಲಿಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರನ್ನು ಗುಲಾಮಗಿರಿಯತ್ತ ತಳ್ಳುತ್ತಿದೆ ಎಂದು ಆರೋಪಿಸಿದರು. ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ, ಬ್ರಿಟಿಷರ ವಿರುದ್ಧ ಮೊಳಗಿದ ‘ಕ್ವಿಟ್ ಇಂಡಿಯಾ’ ಚಳವಳಿಯ ಸ್ಫೂರ್ತಿಯಲ್ಲಿ, ಕಾರ್ಪೊರೇಟ್ ಕಂಪೆನಿಗಳ ಜನವಿರೋಧಿ ನೀತಿಗಳ ವಿರುದ್ಧ ‘ಕಾರ್ಪೊರೇಟ್ ಕಂಪೆನಿಗಳೇ ದೇಶ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಸೈಯ್ಯದ್ ಅಲಿ ಮಾತನಾಡಿದರು, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಭಾಶ್ಚಂದ್ರ ನಾಯಕ್, ಉಮೇಶ್ ಕುಂದರ್, ಸುನೀತಾ ಶೆಟ್ಟಿ, ನಳಿನಿ, ನಾಗರಾಜ್ ಕಾಂಚನ್, ಸರೋಜ, ಪ್ರಭಾಕರ್ ಕುಂದರ್, ಮೋಹನಚಂದ್ರ, ನಾಗೇಶ್, ರಮೇಶ್, ವಾಮನ ಪೂಜಾರಿ, ಮುರುಳಿ, ರಂಗನಾಥ್ ಸಾರಿಕ್, ಶಾರದಾ, ಶರ್ಮಿಳಾ ಸೇರಿದಂತೆ ರೈತ–ಕಾರ್ಮಿಕ–ಕೂಲಿಕಾರರು ಭಾಗವಹಿಸಿದ್ದರು.

ಅಂಚೆ ಕಚೇರಿ ಎದುರಿನಿಂದ ರಸ್ತೆ ತಡೆಗೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಬಂಧಿಸಿದರು. ಬಳಿಕ ಬಂಧಿತರೆಲ್ಲರನ್ನು ಬಿಡುಗಡೆಗೊಳಿಸಿದರು.