ಮೇ 20ರಂದು ಯುವಕರ ತಂಡವೊಂದು ಟೆಸ್ಟ್ ಡ್ರೈವ್ ಕಾರಿನಲ್ಲಿ ಬಂದು ತಲವಾರು ತೋರಿಸಿ ದರೋಡೆಗೆ ಯತ್ನಿಸಿದರು ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಕಿಬ್ ಮತ್ತು ಆಶೀಕ್ ಎಂಬವರನ್ನು ಬಂಧಿಸಿತ್ತು.
ಉಡುಪಿ : ಕೆಲವು ಸಮಯದಿಂದ ತಟಸ್ಥವಾಗಿದ್ದ ಕಾಪುವಿನ ಗರುಡ ಗ್ಯಾಂಗ್, ನಗರದ ಕುಂಜಿಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಗ್ಯಾಂಗ್ ವಾರ್ ನಡೆಸಿ ಮತ್ತೆ ಸಕ್ರಿಯವಾಗಿರುವುದನ್ನು ತೋರಿಸಿದೆ. ರಾಜ್ಯಾದ್ಯಂತ ಹತ್ತಾರು ದರೋಡೆ, ಹಲ್ಲೆ ಇತ್ಯಾದಿ ಅಪರಾಧ ಕೃತ್ಯಗಳನ್ನು ನಡೆಸಿರುವ ಈ ಗ್ಯಾಂಗ್ ಇದೀಗ ಇಬ್ಭಾಗವಾಗಿದ್ದು, ಪರಸ್ಪರ ರಸ್ತೆಯಲ್ಲಿ ತಲುವಾರು ಬೀಸಿ ಹೊಡೆದಾಡಿಕೊಂಡಿದೆ.
ಮೇ 18ರಂದು ಈ ಘಟನೆ ನಡೆದಿದ್ದು, 20ರಂದು ಪ್ರಕರಣ ದಾಖಲಾಗಿತ್ತು. ಈ ಗ್ಯಾಂಗ್ ವಾರನ್ನು ಯಾರೋ ವಿಡಿಯೋ ಚಿತ್ರೀಕರಣ ಮಾಡಿದ್ದು, ಇದೀಗ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಶಿಕ್, ರಾಕೀಬ್ ಮತ್ತು ಸಕ್ಲೇನ್ ಎಂಬವರನ್ನು ಬಂಧಿಸಿದ್ದಾರೆ.
ಮೇ 20ರಂದು ಯುವಕರ ತಂಡವೊಂದು ಟೆಸ್ಟ್ ಡ್ರೈವ್ ಕಾರಿನಲ್ಲಿ ಬಂದು ತಲವಾರು ತೋರಿಸಿ ದರೋಡೆಗೆ ಯತ್ನಿಸಿದರು ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಕಿಬ್ ಮತ್ತು ಆಶೀಕ್ ಎಂಬವರನ್ನು ಬಂಧಿಸಿತ್ತು.
ಇದೀಗ ವಿಡಿಯೋ ವೈರಲ್ ಆದ ಮೇಲೆ ಇದು ದರೋಡೆ ಅಲ್ಲ, ಗ್ಯಾಂಗ್ ವಾರ್ ಎಂದು ಬಹಿರಂಗವಾಗಿದೆ. ಹಿಂದೆ ಒಂದಾಗಿ ಅಪರಾಧಿ ಕೃತ್ಯಗಳನ್ನು ನಡೆಸುತ್ತಿದ್ದ ಈ ತಂಡ, ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರದಲ್ಲಿ ಮಜೀದ್ ಮತ್ತು ಆಶೀಕ್ ನಡುವೆ ವೈಮನಸ್ಸಿನಿಂದ ಇಬ್ಭಾಗವಾಗಿದೆ.
ಮೊನ್ನೆ ಎರಡೂ ತಂಡಗಳು ಸಂಧಾನಕ್ಕಾಗಿ ಕಾರಿನಲ್ಲಿ ಉಡುಪಿಗೆ ಬಂದಿದ್ದು, ಈ ಸಂದರ್ಭದಲ್ಲಿ ರಸ್ತೆಯಲ್ಲಿ ಪರಸ್ಪರ ಕಾರುಗಳನ್ನು ಡಿಕ್ಕಿ ಹೊಡೆಸಿ, ನಂತರ ಹೊಡೆದಾಡಿಕೊಂಡಿದ್ದಾರೆ. ಒಂದು ತಂಡದವರ ಕಾರನ್ನು ಇನ್ನೊಂದು ತಂಡದ ಸದಸ್ಯನಿಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಆಗ ಗಾಯಗೊಂಡ ಯುವಕನ ತಂಡದವರು ಕೈಯಲ್ಲಿ ತಲವಾರು ಹಿಡಿದುಕೊಂಡು ಬಂದಾಗ ಕಾರು ಅಲ್ಲಿಂದ ಪರಾರಿಯಾಗಿದೆ.
ಮೂವರು ಆರೋಪಿಗಳನ್ನು ಬಂಧಿಸಿದ್ದು, ಇತರ ಆರೋಪಿಗಳನ್ನೂ ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು, 2 ದ್ವಿಚಕ್ರ ವಾಹನ, ತಲ್ವಾರನ್ನು ವಶಕ್ಕೆ ಪಡೆದಿದ್ದೇವೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಆಧರಿಸಿ, ಹೆಚ್ಚುವರಿ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಎಸ್ಪಿ ಡಾ.ಅರುಣ್ ಹೇಳಿದ್ದಾರೆ.