ನಮೋ ಸ್ವಾಗತಕ್ಕೆ ಉಡುಪಿ ಸಜ್ಜು

| Published : Nov 23 2025, 03:15 AM IST

ಸಾರಾಂಶ

ಈಗಾಗಲೇ ಪ್ರಧಾನಿ ಕಚೇರಿಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಪ್ರಧಾನಿ ಅವರ ಪ್ರವಾಸ ಕಾರ್ಯಕ್ರಮದ ಕಾರ್ಯಸೂಚಿ ಬಂದಿದೆ. ಅದರಂತೆ ಪ್ರಧಾನಿ ಮೋದಿ ಅವರು ನ.28ರ ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ 11.45ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿಉಡುಪಿ ಮೈದಾನಕ್ಕೆ ಬಂದಿಳಿಯುತ್ತಾರೆ.

28ರಂದು ಕೃಷ್ಣಮಠಕ್ಕೆ ಮೋದಿ । ರಸ್ತೆಗಳಿಗೆ ಡಾಂಬರು, ಬೃಹತ್‌ ಚಪ್ಪರ ನಿರ್ಮಾಣ

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ.28ರಂದು ಲಕ್ಷಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಕೃಷ್ಣಮಠ, ಬಿಜೆಪಿ ಮತ್ತು ಜಿಲ್ಲಾಡಳಿತದಿಂದ ಭರದ ಸಿದ್ಧತೆಗಳಾಗುತ್ತಿವೆ.ಈಗಾಗಲೇ ಪ್ರಧಾನಿ ಕಚೇರಿಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಪ್ರಧಾನಿ ಅವರ ಪ್ರವಾಸ ಕಾರ್ಯಕ್ರಮದ ಕಾರ್ಯಸೂಚಿ ಬಂದಿದೆ. ಅದರಂತೆ ಪ್ರಧಾನಿ ಮೋದಿ ಅವರು ನ.28ರ ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ 11.45ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿಉಡುಪಿ ಮೈದಾನಕ್ಕೆ ಬಂದಿಳಿಯುತ್ತಾರೆ. ಅಲ್ಲಿಂದ 12 ಗಂಟೆಗೆ ಸರಿಯಾಗಿ ಕೃಷ್ಣಮಠಕ್ಕೆ ಆಗಮಿಸಿ, ಕೃಷ್ಣದರ್ಶನ, ಕನಕ ಮಂಟಪ ಉದ್ಘಾಟನೆ ನಡೆಸಿ, ಪರ್ಯಾಯ ಶ್ರೀಗಳು ಮತ್ತು ಇತರ ಮಠಾಧೀಶರೊಂದಿಗೆ 15 ನಿಮಿಷಗಳ ಕಾಲ ಸಮಾಲೋಚನೆ ನಡೆಸಲಿದ್ದಾರೆ.ಮಧ್ಯಾಹ್ನ 12.15ಕ್ಕೆ ಕೃಷ್ಣಮಠದ ಬಳಿ ವಿಶಾಲ ಮೈದಾನದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಿ ತಾವೂ ಗೀತೆಯ 10 ಶ್ಲೋಕಗಳನ್ನು ಪಠಣ ಮಾಡುತ್ತಾರೆ ಮತ್ತು ಸುಮಾರು 1.30 ನಿಮಿಷಗಳ ಕಾಲ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ಅಲ್ಲಿಂದ 1.40ಕ್ಕೆ ಹೊರಟು, ಆದಿಉಡುಪಿ ಹೆಲಿಪ್ಯಾಡ್‌ ಮೂಲಕ 1.45ಕ್ಕೆ ಹೆಲಿಕಾಪ್ಟರ್‌ನಲ್ಲಿ ಮಂಗಳೂರಿಗೆ, ಅಲ್ಲಿಂದ ಗೋವಾದ ಪರ್ತಗಾಳಿ ಮಠಕ್ಕೆ ತೆರಳಿ, ಅಲ್ಲಿನ ಗುರುಪರಂಪರೆಯ 550ನೇ ವರ್ಷಾಚರಣೆಯಲ್ಲಿ ಭಾಗವಹಿಸುತ್ತಾರೆ.ಆದಿಉಡುಪಿ ರಸ್ತೆಗೆ ಕಾಂಕ್ರೀಟ್:

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ - ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ, ಸಭೆಗಳ‍ನ್ನು ನಡೆಸಿದೆ. ಪ್ರಧಾನಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೊಂಡಗಂಡಿಗಳಿಂದ ತೀರಾ ಹಾಳಾಗಿದ್ದ ಆದಿಉಡುಪಿ- ಉಡುಪಿ ರಸ್ತೆಗೆ ಕಾಂಕ್ರೀಟ್ ಹಾಕಲಾಗುತ್ತಿದೆ. ಕೃಷ್ಣಮಠದ ಸುತ್ತಮುತ್ತಲಿನ ರಸ್ತೆಗಳಿಗೂ ಕಾಯಕಲ್ಪ ನಡೆಯುತ್ತಿದೆ. ನಗರಸಭೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಯಾವುದೇ ಅನಾಪೇಕ್ಷಿತ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ, ಪ್ರಧಾನಿ ಸಂಚರಿಸುವ ರಸ್ತೆ ಮತ್ತು ಕೃಷ್ಣಮಠದಲ್ಲಿ ಬಂದೋಬಸ್ತ್‌ಗೆ ಸಿದ್ಧತೆ ನಡೆಸಿವೆ. ಪ್ರಧಾನಿ ಸಂಚರಿಸುವ ರಸ್ತೆಗಳ ಇಕ್ಕೆಲಗಳ ಅಂಗಡಿ, ಹೋಟೆಲ್‌ಗಳನ್ನು ಅಂದು ಮುಚ್ಚುವಂತೆ ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ.

ಆದಿಉಡುಪಿ ಮೈದಾನದಲ್ಲಿ ಈ ಹಿಂದೆ ಬ‍ಳಸಲಾಗಿದ್ದ 2 ಹೆಲಿಪ್ಯಾಡ್‌ಗಳಿವೆ. ಅದರ ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಇನ್ನೊಂದು ಹೆಚ್ಚುವರಿ ಹೆಲಿಪ್ಯಾಡ್ ನಿರ್ಮಾಣ ಕೂಡ ನಡೆಯುತ್ತಿದೆ.ಲಕ್ಷ ಮಂದಿ ಕೂರುವ ಚಪ್ಪರ:

ಮೋದಿ ಅವರ ಸ್ವಾಗತಕ್ಕೆ ಕಷ್ಣಮಠದಲ್ಲಿ ಭರದ ಸಿದ್ಧತೆಗಳಾಗುತ್ತಿವೆ. ಕೃಷ್ಣಮಠದಲ್ಲಿ ತೀರ್ಥ ಮಂಟಪಕ್ಕೆ ಪರ್ಯಾಯ ಪುತ್ತಿಗೆ ಶ್ರೀಗಳು ಚಿನ್ನದ ಹೊದಿಸಿದ್ದು, ಈ ಕನಕ ತೀರ್ಥ ಮಂಟಪವನ್ನು ಮೋದಿ ಅವರು ಕೃಷ್ಣನಿಗೆ ಅರ್ಪಿಸಲಿದ್ದಾರೆ.

ನಂತರ ಕೃಷ್ಣಮಠದ ಪಕ್ಕದ ಖಾಸಗಿಯವರ ಗದ್ದೆಗಳನ್ನು ಸಮತಟ್ಟುಗೊಳಿಸಿ, ಲಕ್ಷ ಮಂದಿ ಕೂತು ಗೀತೆ ಪಾರಾಯಣಕ್ಕೆ ಅನುಕೂಲವಾಗುವಂತೆ ಜರ್ಮನ್ ತಂತ್ರಜ್ಞಾನ ಬಳಸಿ ಅತ್ಯಂತ ಸುರಕ್ಷಿತವಾದ ಚಪ್ಪರ ನಿರ್ಮಾಣವಾಗುತ್ತಿದೆ. ಜೊತೆಗೆ ಇಲ್ಲಿ ಮೋದಿ ಅವರಿಗಾಗಿ ಬೃಹತ್ ವೇದಿಕೆ ಕೂಡ ಸಿದ್ಧವಾಗಲಿದೆ.ರೋಡ್ ಶೋ ನಡೆಯಲಿದೆ?

ಇನ್ನು ತಮ್ಮ ಪರಮನಾಯಕ ಮೋದಿ ಅವರು ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೂ ಸಂಭ್ರಮದ ಸಿದ್ಧತೆಗಳಾಗುತ್ತಿವೆ. ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉಡುಪಿಗೆ ಭೇಟಿ ನೀಡಿ ಮೊದಲ ಹಂತದ ಸಭೆ ನಡೆಸಿದ್ದಾರೆ. ನ.25 ಮತ್ತು 27ರಂದು ಪಕ್ಷದ ವರಿಷ್ಠರು ಪುನಃ ಉಡುಪಿಗೆ ಬಂದು ಸಭೆಗಳನ್ನು ನಡೆಸಿ ಕಾರ್ಯಕರ್ತರಿಗೆ ಸೂಚನೆ ನೀಡಲಿದ್ದಾರೆ.

ಈ ನಡುವೆ ಬಿಜೆಪಿ, ಮೋದಿ ಅವರು ಹೆಲಿಪ್ಯಾಡ್‌ನಿಂದ ಉಡುಪಿಗೆ ಬರುವ 2 ಕಿ.ಮೀ. ರಸ್ತೆಯಲ್ಲಿ ಬೃಹತ್ ರೋಡ್ ಶೋ ಮಾಡುವ ಯೋಚನೆಯಲ್ಲಿದ್ದಾರೆ. ಆದರೆ ಇದಕ್ಕೆ ಪ್ರಧಾನಿ ಅವರ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಯಿಂದ ಗ್ರೀನ್ ಸಿಗ್ನಲ್ ದೊರಕಬೇಕಾಗಿದೆ. ಎಸ್‌ಪಿಜಿ ಸೋಮವಾರ ಉಡುಪಿಗೆ ಆಗಮಿಸಲಿದೆ.------

ನಿರ್ಮಲಾ, ಜೋಷಿ, ಬಿ.ಎಸ್.ವೈ...

ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಭೇಟಿ ನೀಡುವ ಸಂದರ್ಭದಲ್ಲಿ ಉಡುಪಿಯ ಅಷ್ಟ ಮಠಾಧೀಶರು ಉಪಸ್ಥಿತರಿರುತ್ತಾರೆ. ಜೊತೆಗೆ ಮೋದಿ ಅವರೊಂದಿಗೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿಯ ನಾಯಕರ ಗಡಣವೇ ಆಗಮಿಸಲಿದೆ.