ಆರೋಗ್ಯ ಸಂಪನ್ನ ಸಮಾಜ ಮತ್ತು ಸುರಕ್ಷಿತ ಭಾರತ ನಿರ್ಮಾಣದ ಪ್ರಾರ್ಥನೆಯೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ನ. 29 ರಂದು ನಗರದ ಎಂ.ಜಿ.ಎಂ. ಮೈದಾನದಲ್ಲಿ ‘ಮಹಾಧನ್ವಂತರಿ ಯಾಗ’ದ ಆಯೋಜನೆಯಾಗಿದೆ.
ಉಡುಪಿ: ಆರೋಗ್ಯ ಸಂಪನ್ನ ಸಮಾಜ ಮತ್ತು ಸುರಕ್ಷಿತ ಭಾರತ ನಿರ್ಮಾಣದ ಪ್ರಾರ್ಥನೆಯೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ನ. 29 ರಂದು ನಗರದ ಎಂ.ಜಿ.ಎಂ. ಮೈದಾನದಲ್ಲಿ ‘ಮಹಾಧನ್ವಂತರಿ ಯಾಗ’ದ ಆಯೋಜನೆಯಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಯಾಗದ ವೆಬ್ಸೈಟ್ ಮತ್ತು ಭಿತ್ತಿಪತ್ರ, ಆಮಂತ್ರಣ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಸನಾತನ ಸಂಸ್ಥೆಯ 75ನೇ ಧರ್ಮಪ್ರಚಾರಕ ಸಂತರಾದ ರಮಾನಂದ ಗೌಡ, ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಹಾಗೂ ಆಯೋಜನ ಸಮಿತಿಯ ಗುರುಪ್ರಸಾದ್ ಗೌಡ ಪ್ರಚಾರ ಸಾಹಿತ್ಯಗಳನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಯಾಗದ ಸ್ವಾಗತ ಸಮಿತಿಯ ರಚನೆ ಮತ್ತು ಪ್ರಚಾರದ ಬಗ್ಗೆ ಚರ್ಚೆಯಾಯಿತು. ಸಮಿತಿ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಅವರು ಯಾಗದ ವಿವಿಧ ಕಾರ್ಯವಿಭಾಗಗಳ ಜವಾಬ್ದಾರಿಗಳನ್ನು ಘೋಷಿಸಿದರು.ಶಾಸಕ ಯಶ್ಪಾಲ್ ಸುವರ್ಣರು, ಈ ಯಾಗವು ನಾಡಿಗೆ ಆರೋಗ್ಯ, ಶಾಂತಿ ಮತ್ತು ಸಾತ್ತ್ವಿಕತೆಯನ್ನು ಕರುಣಿಸುವ ದಿವ್ಯ ಕಾರ್ಯಕ್ರಮವಾಗಿದ್ದು, ಸಮಾಜದ ಸರ್ವ ಧರ್ಮಪ್ರೇಮಿಗಳೂ ಒಗ್ಗಟ್ಟಿನಿಂದ ಶ್ರಮಿಸಿ ಯಾಗವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಗುರುಪ್ರಸಾದ್ ಗೌಡ ಅವರು, ಇತಿಹಾಸದಲ್ಲೇ ಮೊದಲ ಬಾರಿ ಉಡುಪಿಯಲ್ಲಿ ನಡೆಯಲಿರುವ ಈ ಯಾಗದಲ್ಲಿ ಸುಮಾರು 10,000 ಭಕ್ತರು ಒಂದೆಡೆ ಸೇರಲಿದ್ದಾರೆ. ಈ ಯಾಗದ ನಿಮಿತ್ತ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳು ಉಡುಪಿಗೆ ಆಗಮಿಸಲಿವೆ. ಭಗವಾನ್ ಶ್ರೀಕೃಷ್ಣನ ಪವಿತ್ರ ನಗರಿ ದ್ವಾರಕೆ ಮತ್ತು ಮಥುರೆಯ ಸಂರಕ್ಷಿತ ವಸ್ತುಗಳು ಸಹ ಭಕ್ತರಿಗೆ ದರ್ಶನಕ್ಕೆ ಲಭಿಸಲಿವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಯಾಗದ ಬಗ್ಗೆ ಮನೆಮನೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಸನಾತನ ಸಂಸ್ಥೆ ಹಾಗೂ ಆಯೋಜನಾ ಸಮಿತಿ ತಿಳಿಸಿದೆ.