ಉಡುಪಿ: ಪಂಚಭೂತಗಳಲ್ಲಿ ಹರೀಶ್ ರಾಯ್‌ ಲೀನ

| Published : Nov 08 2025, 02:45 AM IST

ಸಾರಾಂಶ

ಬೆಂಗಳೂರಿನಲ್ಲಿ ನಿಧನರಾದ ಕನ್ನಡ - ತಮಿಳು ಸಿನಿಮಾ ನಟ ಹರೀಶ್ ಆಚಾರ್ಯ ಯಾನೆ ಹರೀಶ್ ರಾಯ್ ಅಂತ್ಯಸಂಸ್ಕಾರ ಶುಕ್ರವಾರ ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಯಿತು.

ಉಡುಪಿ: ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಕನ್ನಡ - ತಮಿಳು ಸಿನಿಮಾ ನಟ ಹರೀಶ್ ಆಚಾರ್ಯ ಯಾನೆ ಹರೀಶ್ ರಾಯ್ ಅಂತ್ಯಸಂಸ್ಕಾರ ಶುಕ್ರವಾರ ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಯಿತು.

ಇದಕ್ಕೆ ಮೊದಲು ಬೆಂಗಳೂರಿನ ತರಲಾದ ಪಾರ್ಥಿವ ಶರೀರವನ್ನು ಇಲ್ಲಿನ ಅಂಬಲಪಾಡಿಯಲ್ಲಿರುವ ಅವರು ಹುಟ್ಟಿದ ಮನೆಗೆ ತರಲಾಯಿತು. ಅಲ್ಲಿ ತುಳಸಿಕಟ್ಟೆಯ ಮುಂಭಾಗ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣರ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು, ಪುತ್ರರಾದ ರೋನಿತ್, ರಾಯ್, ರೋಷನ್ ರಾಯ್ ಅವರು ಅರ್ಚಕರ ಸಮ್ಮುಖದಲ್ಲಿ ವಿಧಿಗಳನ್ನು ನಡೆಸಿದರು.ಪತ್ನಿ, ಸಹೋದರ, ಸಹೋದರಿಯರು ಮತ್ತು ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದ ಬಳಿಕ, ಪಾರ್ಥಿವ ಶರೀರವನ್ನು ಬೀಡಿನ ಗುಡ್ಡೆಗೊಯ್ದು ಮಕ್ಕಳಿಂದ ಅಗ್ನಿಸ್ಪರ್ಶ ಮಾಡಲಾಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ರಾಯ್ ಸಹೋದರಿ, ಅಣ್ಣನಿಗೆ ಕೆಜಿಎಫ್ 1 ಸಿನೆಮಾ ಶೂಟಿಂಗ್ ಸಂದರ್ಭದಲ್ಲಿಯೇ ಉಸಿರಾಟದ ತೊಂದರೆ ಕಂಡುಬಂದಿತ್ತು, ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಮಾಡಿಕೊಂಡಿದ್ದರೇ ಇನ್ನಷ್ಟು ವರ್ಷ ಬದುಕುತಿದ್ದರು ಎಂದು ದುಃಖ ತೋಡಿಕೊಂಡರು.