ಉಡುಪಿ: ಭಾರಿ ಮಳೆ, ನದಿ ಉಕ್ಕಿ ಪ್ರವಾಹ ಸಾಧ್ಯತೆ

| Published : Aug 02 2024, 12:46 AM IST

ಸಾರಾಂಶ

ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಮುಸಲಧಾರೆ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಕಾರ್ಕಳ ತಾಲೂಕಿನಲ್ಲಿ 33 ಮಂದಿಯನ್ನು ರಾತ್ರಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾದ್ಯಂತ ಗುರುವಾರ ಭಾರಿ ಮಳೆಯಾಗಿದೆ. ದಿನವಿಡೀ ಬಿಟ್ಟುಬಿಟ್ಟು ಮಳೆಯಾಗುತ್ತಿದ್ದರೂ, ಬಂದಾಗಲೆಲ್ಲಾ ಜಡಿಮಳೆಯಾಗಿದೆ. ಮಳೆಯ ಜೊತೆಗೆ ಗಾಳಿಯೂ ಬೀಸುತ್ತಿದ್ದು, ಇದು ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಗುರುವಾರ ಮುಂಜಾನೆ ಜಿಲ್ಲೆಯ ಎಲ್ಲ ನದಿಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಅಕ್ಕಪಕ್ಕದ ಕೃಷಿಭೂಮಿಗಳಿಗೂ ನೀರು ತುಂಬಿತ್ತು, ಮಧ್ಯಾಹ್ನದ ಹೊತ್ತಿಗೆ ಪ್ರವಾಹ ಸ್ವಲ್ಪ ಕಡಿಮೆಯಾದರೂ ಸಂಜೆ ಮತ್ತೆ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಬುಧವಾರ ರಾತ್ರಿ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಮುಸಲಧಾರೆ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಕಾರ್ಕಳ ತಾಲೂಕಿನಲ್ಲಿ 33 ಮಂದಿಯನ್ನು ರಾತ್ರಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

ಕುಂದಾಪುರ ತಾಲೂಕಿನಲ್ಲಿಯೂ ಭಾರೀ ಮಳೆಯಾಗಿದ್ದು, 3 ಮನೆಗಳು ಸಂಪೂರ್ಣ ನೆಲಕಚ್ಚಿ ಲಕ್ಷಾಂತರ ರು. ಹಾನಿ ಸಂಭವಿಸಿದೆ. ಈ ವರ್ಷ 2ನೇ ಬಾರಿ ಗುರುವಾರ ಮುಂಜಾನೆ ಕುಬ್ಜಾ ನದಿಯ ನೀರು ಕಮಲಶಿಲೆಯ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಾಲಯದೊಳಗೆ ನುಗ್ಗಿದೆ.

ಗುರುವಾರ ಮುಂಜಾನೆ ಸ್ವರ್ಣ ನದಿಯಲ್ಲಿ ಪ್ರವಾಹ ಉಂಟಾಗಿತ್ತು. ಬಜೆ ಮತ್ತು ಮಾಣೈ ಅಣೆಕಟ್ಟೆಗಳಲ್ಲಿ ನೀರು ಉಕ್ಕಿ ಹೊರಹರಿಯುತ್ತಿದ್ದು, ಅಸುಪಾಸಿನ ತೋಟಗಳಿಗೆ ನೀರು ನುಗ್ಗಿತ್ತು.

ಬ್ರಹ್ಮಾವರ ಸಮೀಪದ ಉಪ್ಪೂರು ಹೊಳೆ, ಮಡಿಸಾಲು ಹೊಳೆಗಳಲ್ಲಿಯೂ ನೀರು ಉಕ್ಕೇರಿದ್ದು, ಉಪ್ಪೂರಿನಲ್ಲಿರುವ ಪ್ರಾಥಮಿ ಶಾಲೆ ಮತ್ತು ಅಂಗನವಾಡಿಗಳ ಆವರಣಕ್ಕೆ ನೀರು ನುಗ್ಗಿತ್ತು, ಆದರೆ ರಜೆಯ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳಿರಲಿಲ್ಲ, ಆದ್ದರಿಂದ ಯಾವುದೇ ಅನಾಹುತಗಳಾಗಿಲ್ಲ.

ಕುಂದಾಪುರದ ಸೌಪರ್ಣಿಕಾ, ಸೀತಾ, ಉಡುಪಿಯ ಸ್ಪರ್ಣ, ಕಾಪುವಿನ ಪಾಪನಾಶಿನಿ ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ನಿರಂತರ ಸುರಿದರೆ ಯಾವುದೇ ಕ್ಷಣದಲ್ಲಿ ಪ್ರವಾಹ ಉಕ್ಕುವ ಸಾಧ್ಯತೆ ಇದೆ.

* 200ಕ್ಕೂ ಹೆಚ್ಚು ಜನರ ಸ್ಥಳಾಂತರ

ಕುಂದಾಪುರದ ತಲ್ಲೂರು, ಗುಲ್ವಾಡಿ, ಮೊಳಹಳ್ಳಿಗಳಲ್ಲಿ ಅಪಾಯದಲ್ಲಿದ್ದ ಮನೆಗಳ ಸುಮಾರು 133 ಮಂದಿಯನ್ನು ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕಾರ್ಕಳ ತಾಲೂಕು ಇನ್ನಾ, ಮುಂಡ್ಕೂರು, ಬೋಳ, ನಿಟ್ಟೆ, ಸಾಣೂರು, ದುರ್ಗಾ, ಸೂಡಾ ಮತ್ತು ಇರ್ವತ್ತೂರು ಗ್ರಾಮಗಳ 44 ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು. ಹೆಬ್ರಿ ತಾಲೂಕು ನಡ್ಪಾಲು ಗ್ರಾಮದ 3 ಜನರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿತ್ತು.

ಕಾಪು ತಾಲೂಕು ಯೇಣಗುಡ್ಡೆ, ಫಲಿಮಾರು, ಪಿಲಾರು, ಶಿರ್ವ ಮತ್ತು ಬೆಳ್ಳೆ ಗ್ರಾಮಗಳಲ್ಲಿ ನೆರೆ ಸಂತ್ರಸ್ತರಾದ 32 ಜನರನ್ನು ಸಂಬಂಧಿಕರ ಮನೆಗೆ ಮತ್ತು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.