ಸಾರಾಂಶ
ಮಂಗಳೂರು : ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿ ಮತ್ತು ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು, ಸಂತ್ರಸ್ತರು ಸೇರಿ ಗುರುವಾರ ದ.ಕ. ಜಿಲ್ಲಾ ಕಚೇರಿ ಮುಂದೆ ಧರಣಿ ನಡೆಸಿದರು. ರೈತರಿಗೆ ಬದುಕನ್ನು ನಿರ್ನಾಮಗೊಳಿಸುವ ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ರೈತರಿಗೆ ನ್ಯಾಯ ಒದಗಿಸಲು ಉಭಯ ಜಿಲ್ಲೆಗಳ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಕಂಪೆನಿಯ ಅಧಿಕಾರಿಗಳ ಸಭೆ ಕರೆಯುವಂತೆ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸುಮಾರು ಒಂದು ಗಂಟೆ ಕಾಲ ಮೌನ ಧರಣಿ ನಡೆಸಿದ ಸಂತ್ರಸ್ತರು ಜಿಲ್ಲಾಧಿಕಾರಿ ಅವರಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಯಾವುದೇ ಧರಣಿ ಹಾಗೂ ಪ್ರತಿಭಟನೆಗೆ ಅನುಮತಿ, ಅವಕಾಶ ಇಲ್ಲದಿದ್ದರೂ ರೈತರು ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಧರಣಿ ನಿರತ ಸಂತಸ್ತರೊಂದಿಗೆ ಮಾತುಕತೆ ನಡೆಸಿದರು. ನಿಡ್ಡೋಡಿ ಕೊಲತ್ತಾರುವಿನಲ್ಲಿ ವಿದ್ಯುತ್ ಟವರ್ ಕಾಮಗಾರಿ ನಿರ್ಮಿಸದಂತೆ ಜಿಲ್ಲಾಧಿಕಾರಿ ಆದೇಶ ಮಾಡುವಂತೆ ಆಗ್ರಹಿಸಿದರು. ಈ ಸಂಬಂಧ ಚರ್ಚಿಸಲು ವಾರದ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಲ್ಲಿವರೆಗೆ ಕಾಮಗಾರಿ ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಸಂಯೋಜಕ ದಯಾನಂದ ಶೆಟ್ಟಿ, ಕಾರ್ಯದರ್ಶಿ ಮನೋಹರ್ ಶೆಟ್ಟಿ , 440 ಕೆ.ವಿ. ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜು ಗೌಡ, ಏಳಿಂಜೆ ವಲಯ ಅಧ್ಯಕ್ಷ ಸುಕೇಶ್ಚಂದ್ರ ಶೆಟ್ಟಿ, ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಪೋನ್ಸ್ ಲೋಬೊ , ಸಂತ್ರಸ್ತೆ ಕೌಶಲ್ಯ ಎಂ ಶೆಟ್ಟಿ ಏಳಿಂಜೆ, ಪ್ರಮುಖರಾದ ಚಿತ್ತರಂಜನ್ ಪೂಜಾರಿ, ಉದಯ ಕಂಬಳಿ,ಶಿವಚಂದ್ರ, ಅಣ್ಣುಗೌಡ ಮಂಜಲಾಡಿ, ಚಂದ್ರಹಾಸ ಶೆಟ್ಟಿ, , ಶೇಕಬ್ಬ ಕುಪ್ಪೆಪದವು ಅವರು ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದರು.
ನಾವು ಯೋಜನೆಗಳ ವಿರೋಧಿಗಳಲ್ಲ. ಯೋಜನೆಯಿಂದ ಕೃಷಿ ಭೂಮಿ, ಅರಣ್ಯ ನಾಶವಾಗಬಾರರು. ರೈತರಿಗೆ ತೊಂದರೆಯಾಗದ ಜಾಗದಲ್ಲಿ ವಿದ್ಯುತ್ ಲೈನ್ ಕಾಮಗಾರಿ ಕೈಗೊಳ್ಳಲಿ. ಇದಕ್ಕೆ ಪರ್ಯಾಯ ಮಾರ್ಗ ಕಂಡುಹುಡುಕಲು ರೈತರು ಆಗ್ರಹಿಸಿದರು.
ಆ ಬಳಿಕ ಸಂತ್ರಸ್ತರು ಅಲ್ಲಿಂದ ತೆರಳಿದರು. ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಚೇರಿಗೆ ತೆರಳಿದ ರೈತ ಮುಖಂಡರು ಸಂಸದರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರಲ್ಲಿ ಮಾತುಕತೆ ನಡೆಸಿದರು.
ವಾರದೊಳಗೆ ಸಭೆ: ಜಿಲ್ಲಾಧಿಕಾರಿ
ವಿದ್ಯುತ್ ಯೋಜನೆಗೆ ಸಂಬಂಧಿಸಿ ಹಿಂದೆ ರೈತರ ಸಭೆ ನಡೆಸಲಾಗಿದೆ. ಅಲ್ಲಿ ಕೈಗೊಂಡ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ಯೋಜನೆಯಿಂದ ಭೂಮಿ ಕಳೆದುಕೊಳ್ಳುವವರಿಗೆ ಕೇರಳದಲ್ಲಿ ಪರಿಹಾರ ನೀಡಿದಂತೆ ಕರ್ನಾಟಕದ ರೈತರಿಗೂ ನೀಡಬೇಕು ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ. ಅದಕ್ಕೆ ಪರ್ಯಾಯವಾಗಿ ನೀರಿನೊಳಗೆ, ಭೂಗತ ವ್ಯವಸ್ಥೆಯಲ್ಲಿ ಲೈನ್ ಎಳೆಯಬೇಕು ಎಂಬ ಬೇಡಿಕೆಯ ಬಗ್ಗೆ ನನಗೆ ಏನನ್ನು ಹೇಳಲು ಸಾಧ್ಯವಿಲ್ಲ. ಸಹಾಯಕ ಆಯಕ್ತರು ನೋಡಲ್ ಅಧಿಕಾರಿಯಾಗಿದ್ದು, ಅವರು ವಾರದೊಳಗೆ ಸಭೆ ಕರೆಯಲಿದ್ದಾರೆ. ಅಲ್ಲಿವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು. ಸಭೆಗೆ ಸಂಬಂಧಪಟ್ಟ ವಿದ್ಯುತ್ ಕಂಪನಿಯ ಅಧಿಕಾರಿಗಳು ಬರುತ್ತಾರೆ. ಅವರ ಮುಂದೆ ನಿಮ್ಮ ಬೇಡಿಕೆಯನ್ನು ತಿಳಿಸಿ ಎಂದರು.