ಸಾರಾಂಶ
ಈ ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9.18ಕ್ಕೆ ಪೆರಂಪಳ್ಳಿ ಎಂಬಲ್ಲಿ ಬಳಿ ದೊಡ್ಡ ಮರವೊಂದು ಭಾರಿ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿತ್ತು. ಇದನ್ನು ಈ ಮಾರ್ಗವಾಗಿ ಬರುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಲೋಕೋಪೈಲಟ್‌ಗಳು ಗಮನಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಮುಂಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಲೋಕೊ ಪೈಲಟ್‌ಗಳ ಸಮಯಪ್ರಜ್ಞೆಯಿಂದ ಬುಧವಾರ ಬೆಳಗ್ಗೆ ಬಾರಕೂರು - ಉಡುಪಿ ನಿಲ್ದಾಣಗಳ ನಡುವೆ ಸಂಭವಿಸಲಿದ್ದ ದೊಡ್ಡ ದುರಂತವೊಂದು ತಪ್ಪಿದೆ.ಈ ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9.18ಕ್ಕೆ ಪೆರಂಪಳ್ಳಿ ಎಂಬಲ್ಲಿ ಬಳಿ ದೊಡ್ಡ ಮರವೊಂದು ಭಾರಿ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿತ್ತು. ಇದನ್ನು ಈ ಮಾರ್ಗವಾಗಿ ಬರುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಲೋಕೋಪೈಲಟ್‌ಗಳು ಗಮನಿಸಿದ್ದರು. ಆದರೆ ವೇಗವಾಗಿ ಚಲಿಸುತ್ತಿದ್ದ ರೈಲು ಅದಾಗಲೇ ಬಿದ್ದ ಮರದಿಂದ ಅನತಿ ದೂರಕ್ಕೆ ಬಂದಾಗಿತ್ತು.
ತಕ್ಷಣವೇ ಸಮಯಪ್ರಜ್ಞೆಯಿಂದ ಎಮರ್ಜೆನ್ಸಿ ಬ್ರೇಕನ್ನು ಬಳಸಿದ ಲೋಕೋಪೈಲಟ್, ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಬಿದ್ದ ಮರದ ಕೆಲವೇ ಅಡಿ ದೂರದಲ್ಲಿ ರೈಲು ನಿಂತಿತು. ಹಳಿಯಲ್ಲಿ ಬಿದ್ದ ಮರ ಪೈಲಟ್‌ಗಳ ಗಮನಕ್ಕೆ ಬರುವುದು ಸ್ವಲ್ಪ ತಡವಾಗಿದ್ದರೂ, ರೈಲು ಹಳಿತಪ್ಪಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಒಎಚ್ಇ ತಂಡದ ಸಿಬ್ಬಂದಿ, ಮರವನ್ನು ಹಳಿಯಿಂದ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿಸಿದ ಮಂಡ್ಯ ಮತ್ತು ಭಟ್ಕಳದ ಲೋಕೊ ಪೈಲಟ್ ಮತ್ತು ಸಹಾಯಕ ಪೈಲಟ್‌ಗೆ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ತಲಾ 15,000 ರು. ಬಹುಮಾನವನ್ನು ಘೋಷಿಸಿದ್ದು, ಸುರತ್ಕಲ್ ನಿಲ್ದಾಣದಲ್ಲಿ ಬಹುಮಾನದ ಚೆಕ್ ಅನ್ನು ಹಸ್ತಾಂತರಿಸಲಾಯಿತು.