ಉಡುಪಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಬೆಲೆ ಏರಿಕೆಯಿಂದಾಗಿ ಉಡುಪಿ ಜಿಲ್ಲೆಯ ಹೊಟೇಲು, ಕ್ಯಾಂಟೀನ್ ಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ, ಉಡುಪಿ ನಗರದ ಐದಕ್ಕೂ ಹೆಚ್ಚು ಸಣ್ಣ ಹೊಟೇಲು ಮತ್ತು ಕ್ಯಾಂಟೀನ್ ಗಳು ಬುಧವಾರದಿಂದ ಮುಚ್ಚಿವೆ. ಈ ಸ್ಥಿತಿ ಹೀಗೆ ಮುಂದುವರಿದರೆ ಇನ್ನಷ್ಟು ಹೊಟೇಲುಗಳು ಬಾಗಿಲು ಹಾಕುವ ಆತಂಕದಲ್ಲಿವೆ.
ಸ್ವಲ್ಪ ದೊಡ್ಡ ಹೊಟೇಲುಗಳಲ್ಲಿ 3 - 4 ದಿನಗಳಿಗಾಗುವಷ್ಟು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಗಳು ದಾಸ್ತಾನಿವೆ. ಆದರೆ ಇನ್ನೊಂದೆರಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ನಾವು ಹೊಟೇಲ್ ಬಂದ್ ಮಾಡಬೇಕಾಗುತ್ತದೆ ಎನ್ನುತ್ತಾರೆ ಉಡುಪಿ ಹೊಟೇಲ್ ಮಾಲಕ ಗುರುಪ್ರಸಾದ್.ಉಡುಪಿಯ ಕೆಲವು ರೆಸ್ಟೊರೆಂಟ್ ಗಳಲ್ಲಿ ಹೆಚ್ಚು ಅಡುಗೆ ಅನಿಲ ಬಳಕೆಯಾಗುವ ತಿಂಡಿ, ಪದಾರ್ಥಗಳನ್ನು ತಯಾರಿಸುವುದನ್ನು ನಿಲ್ಲಿಸಿವೆ, ಮುಖ್ಯವಾಗಿ ಕೆಲವು ವೆಜ್ ರೆಸ್ಟೊರೆಂಟ್ ಗಳಲ್ಲಿ ಇಡ್ಲಿ, ರೋಟಿ ಇತ್ಯಾದಿಗಳನ್ನು ನಿಲ್ಲಿಸಲಾಗಿದೆ ನಾನ್ ವೆಜ್ ರೆಸ್ಟೊರೆಂಟ್‌ಗಳಲ್ಲಿ ತಂದೂರಿ, ರೋಟಿ ಇತ್ಯಾದಿಗಳನ್ನು ತರಿಸುತ್ತಿಲ್ಲ ಎನ್ನುತ್ತಾರೆ ಮಣಿಪಾಲದ ರೆಸ್ಟೊರೆಂಟ್ ಮಾಲಕ ಚಂದ್ರಕಾಂತ್.
ಶಾಲೆಗಳಿಗೆ ತೊಂದರೆಯಾಗಿಲ್ಲ: ತೀರಾ ಅವಶ್ಯಕ ಸೇವೆಗಳಾದ ಶಾಲೆ, ಆಸ್ಪತ್ರೆಗಳಿಗೆ ಅಡುಗೆ ಅನಿಲ ಪೂರೈಕೆಗೆ ಸರ್ಕಾರ ಸೂಚಿಸಿದ್ದರಿಂದ, ಶಾಲೆಗಳಲ್ಲಿ ಬಿಸಿಯೂಟಕ್ಕೆಸ ಆಸ್ಪತ್ರೆಯ ಕ್ಯಾಂಟೀನುಗಳಿಗೆ ತೊಂದರೆಯಾಗಿಲ್ಲ.ಒಂದು ಸಿಲಿಂಡರ್ ಹೊಂದಿರುವವರು, ಒಮ್ಮೆ ಸಿಲಿಂಡರ್ ಪಡೆದ ಮೇಲೆ 25 ದಿನಗಳೊಳಗೆ ಇನ್ನೊಂದು ಸಿಲಿಂಡರ್ ಬುಕ್ ಮಾಡುವುದಕ್ಕೆ ಅವಕಾಶ ಇಲ್ಲ, 2 ಸಿಲಿಂಡರ್ ಹೊಂದಿರುವವರು 35 ದಿನಗಳ ನಂತರವಷ್ಟೇ ಇನ್ನೊಂದು ಸಿಲಿಂಡರ್ ಬುಕ್ ಮಾಡಬಹುದಾಗಿದೆ ಎಂಬ ನಿಯಮವನ್ನು ಎಲ್ಲಾ ಅಡುಗೆ ಅನಿಲ ಪೂರೈಕೆ ಕಂಪನಿಗಳು ಜಾರಿಗೆ ತಂದಿವೆ.ಕೃಷ್ಣಮಠದಲ್ಲಿ ಬಯೋ ಘಟಕ ಸ್ಥಾಪನೆಉಡುಪಿ ಕೃಷ್ಣಮಠದಲ್ಲಿ ನಿತ್ಯ 4 - 5 ಸಾವಿರ ಮಂದಿಗೆ ಊಟ ತಯಾರಿಸಲಾಗುತ್ತದೆ, ಇಲ್ಲಿ ಅಡುಗೆ ಅನಿಲ ಮತ್ತು ಕಟ್ಟಿಗೆಗಳೆರಡನ್ನೂ ಬಳಸಲಾಗುತ್ತದೆ. ಇಲ್ಲಿಯೂ ಅಡುಗೆ ಅನಿಲ ಕೊರತೆಯಾಗಿದೆ, ಆದರೆ ಸಾಕಷ್ಟು ಕಟ್ಟಿಗೆ ಸಂಗ್ರಹ ಇರುವುದರಿಂದ ಸಮಸ್ಯೆಯಾಗಿಲ್ಲ.
ಈ ಅಡುಗೆ ಅನಿಲ ಕೊರತೆದಿಂದ ಸಮಸ್ಯೆಯಾಗಿದೆ, ಕಟ್ಟಿಗೆ ಸಂಗ್ರಹ ಇದ್ದರೂ ಅದನ್ನೇ ನಂಬಿಕೊಂಡು ಇರುವುದಕ್ಕಾಗುವುದಿಲ್ಲ, ಆದ್ದರಿಂದ ಈ ಸಂದರ್ಭ ನಮಗೊಂದು ಹೊಸ ಅವಕಾಶವಾಗಿ ಒದಗಿ ಬಂದಿದೆ. ಕೃಷ್ಣಮಠಕ್ಕೆ ಶಾಶ್ವತ ಬಯೋಗ್ಯಾಸ್ ಘಟಕ ಸ್ಥಾಪಿಸುತಿದ್ದೇವೆ, ವಾರದೊಳಗೆ ಈ ಘಟಕ ಸಿದ್ಧವಾಗುತ್ತದೆ, ನಂತರ ಕೃಷ್ಣಮಠಕ್ಕೆ ಅಡುಗೆ ಅನಿಲದ ಸಮಸ್ಯೆ ಯಾಗುವುದಿಲ್ಲ ಎಂದು ಕೃಷ್ಣಮಠದ ಪರ್ಯಾಯ ಶಿರೂರು ಮಠದ ದಿವಾನ ಉದಯ ಕುಮಾರ್ ಸರಳತ್ತಾಯರು ತಿಳಿಸಿದ್ದಾರೆ