ಉಡುಪಿ: ಕಾನೂನು ಕಾಲೇಜಿನಲ್ಲಿ ಮಾರ್ಗದರ್ಶಿ ಕಾರ್ಯಕ್ರಮ

| Published : Oct 02 2024, 01:13 AM IST

ಸಾರಾಂಶ

ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ೫ ವರ್ಷದ ಬಿಎ - ಎಲ್ಎಲ್‌ಬಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ (ಓರಿಯೆಂಟೇಷನ್) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ೫ ವರ್ಷದ ಬಿಎ - ಎಲ್ಎಲ್‌ಬಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ (ಓರಿಯೆಂಟೇಷನ್) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕೊಪ್ಪದ ಹಿರಿಯ ನೋಟರಿ ವಕೀಲರು ಮತ್ತು ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿಯಾದ ಸುಧೀರ್ ಕುಮಾರ್ ಮುರೋಳಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾಲೇಜಿನಲ್ಲಿ ಇರುವಂತಹ ವಿವಿಧ ಕ್ಲಬ್‌ಗಳ ಸದಸ್ಯರಾಗುವುದರಿಂದ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.ಕಾನೂನು ಪದವಿ ಮುಕ್ತಾಯವಾಗುವುದರ ಒಳಗೆ ವಿದ್ಯಾರ್ಥಿಗಳು ವಕೀಲ ವೃತ್ತಿಗೆ ಬೇಕಾಗಿರುವ ಕೌಶಲ್ಯಗಳನ್ನು ಕಲಿತು ಪರಿಣಿತಿ ಹೊಂದಿರಬೇಕು. ಅದೇ ರೀತಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸಹ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು. ಕಾಲೇಜಿನ ಗ್ರಂಥಾಲಯದ ಪುಸ್ತಕಗಳು, ಪಿಠೋಪಕರಣ ಇನ್ನಿತರ ಪುಸ್ತಕಗಳ ಸುಸ್ಥಿರ ಬಳಕೆಯ ಮೂಲಕ ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.ಕಾಲೇಜಿನ ನಿರ್ದೇಶಕಿ ಪ್ರೊ. ನಿರ್ಮಲಾ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಧ್ಯಾಪಕ ಪ್ರೊ. ರೋಹಿತ್ ಎಸ್. ಅಮೀನ್ ಅವರು ಕಾಲೇಜಿನ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಸುರೇಖಾ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಅಮೋಘ ಘಾಡ್ಕರ್ ಪರಿಚಯಿಸಿದರು. ಡಾ.ಪ್ರೀತಿ ಹರೀಶ್ ರಾಜ್ ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿನಿ ಎಲಿಟಾ ನಿರೂಪಿಸಿದರು.