ಸಾರಾಂಶ
ಜಡಿಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇತರ 40 ಮನೆಗಳಿಗೆ, 2 ಜಾನುವಾರು ಕೊಟ್ಟಿಗೆ ಮತ್ತು ಒಂದು ಶಾಲೆಗೆ ಭಾಗಶಃ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಸೋಮವಾರ ರಾತ್ರಿ ಸುರಿದ ಜಡಿಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇತರ 40 ಮನೆಗಳಿಗೆ, 2 ಜಾನುವಾರು ಕೊಟ್ಟಿಗೆ ಮತ್ತು ಒಂದು ಶಾಲೆಗೆ ಭಾಗಶಃ ಹಾನಿಯಾಗಿದೆ. ಗೋಡೆ ಬಿದ್ದು ಓರ್ವ ಮಹಿಳೆಗೆ ಗಾಯಗಳಾಗಿವೆ.ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ವೆಂಕಮ್ಮ ಅವರ ಮನೆಯ ಮೇಲೆ ಮರ ಬಿದ್ದು ಪೂರ್ಣ ಹಾನಿಗೊಂಡು ಸುಮಾರು 2 ಲಕ್ಷ ರು. ಮತ್ತು ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹನುಮಂತ ಅವರ ಮನೆ ಗಾಳಿ ಮಳೆಗೆ ಧರಾಶಾಹಿಯಾಗಿದ್ದು 2 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ.
ಉಳಿದಂತೆ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿಯೇ ಅತೀ ಹೆಚ್ಚಿನ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನ ಸುಮಾರು 12 ಮನೆಗಳಿಗೆ 4,15,000 ರು.ಗೂ ಅಧಿಕ ನಷ್ಟ ಸಂಭವಿಸಿದೆ. ಬ್ರಹ್ಮಾವರ ತಾಲೂಕಿನ 13 ಮನೆಗಳಿಗೆ 4,85,000 ರು. ಹಾನಿಯಾಗಿದೆ.ಬೈಂದೂರು ತಾಲೂಕಿನ 4 ಮನೆಗಳಿಗೆ 1,40,000 ರು., ಕಾಪು ತಾಲೂಕಿನ 7 ಮನೆಗಳಿಗೆ 2,30,000 ರು., ಹೆಬ್ರಿ ತಾಲೂಕಿನ 2 ಮನೆಗಳಿಗೆ 58,000 ರು. ಮತ್ತು ಕಾರ್ಕಳ ತಾಲೂಕಿನ 1 ಮನೆಗೆ 25,000 ರು. ನಷ್ಟ ಉಂಟಾಗಿದೆ.
ಬೈಂದೂರು ತಾಲೂಕಿನ ಬೈಂದೂರು ಗ್ರಾಮದ ಕನಕ ಹವಾಲ್ದಾರ್ ಅವರ ಜಾನುವಾರು ಕೊಟ್ಟಿಗೆಯ ಮೇಲೆ ಮರಬಿದ್ದು 20,000 ರು. ಮತ್ತು ಕುಂದಾಪುರ ತಾಲೂಕಿನ ಹೆಸ್ಕತೂರು ಗ್ರಾಮದ ಲಕ್ಷ್ಮೀನಾರಾಯಣ ಕೆದ್ಲಾಯ ಅವರ ಜಾನುವಾರು ಕೊಟ್ಟಿಗೆಗೆ 40,000 ರು. ನಷ್ಟವಾಗಿದೆ.ಕುಂದಾಪುರ ತಾಲೂಕಿನ ಕುಳಂಜೆ ಗ್ರಾಮದ ಸ.ಹಿ.ಪ್ರಾ.ಶಾಲೆ ಆವರಣ ಗೋಡೆ ಮಳೆಗೆ ಕುಸಿದಿದೆ. ಹಾಲಾಡಿ ಗ್ರಾಮದ ಪಂಚಾಯಿತಿ ರಸ್ತೆಗೆ ನಿರ್ಮಿಸಲಾಗಿದ್ದ ಕಲ್ವರ್ಟ್ ತಡೆಗೋಡೆ ಭಾರಿ ಮಳೆಗೆ ಕೊಚ್ಚಿ ಹೋಗಿದೆ.
ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 147.30 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 99.80, ಕುಂದಾಪುರ 186.90, ಉಡುಪಿ 98.80, ಬೈಂದೂರು 150.90, ಬ್ರಹ್ಮಾವರ 164.30, ಕಾಪು 60.60, ಹೆಬ್ರಿ 202.20 ಮಿ.ಮೀ. ಮಳೆಯಾಗಿದೆ.---ಗೋಡೆ ಕುಸಿದು ಮಹಿಳೆಗೆ ಗಾಯ
ಕುಂದಾಪುರ ತಾಲೂಕಿನ ಯಡ್ಯಾಡಿ ಮತ್ಯಾಡಿ ಗ್ರಾಮದ ತುಂಬಿಮಕ್ಕಿ ಎಂಬಲ್ಲಿ ಮಳೆಗಾಳಿಗೆ ಮನೆಯ ಗೋಡೆ ಉರುಳಿ ಸುಶೀಲಾ ಮೊಗೇರ್ತಿ ಎಂಬವರ ಎಡಕಾಲಿಗೆ ಗಾಯಗೊಂಡಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.