ಉಡುಪಿ ನಗರಸಭೆ: ಪೌರಾಯುಕ್ತ ಕ್ಷಮೆ ಯಾಚನೆ!

| Published : Sep 07 2024, 01:43 AM IST

ಸಾರಾಂಶ

ಅಂಬಲಪಾಡು ವಾರ್ಡಿನ ಕೆಲವು ರಸ್ತೆಗಳಿಗೆ ಮೂರನೇ ವ್ಯಕ್ತಿಯೊಬ್ಬರ ಶಿಫಾರಸಿನ ಮೇರೆಗೆ ನಗರಸಭೆಯ ಅಧಿಕಾರಿಗಳು ಡಾಂಬರೀಕರಣ, ಚರಂಡಿ ನಿರ್ಮಾಣ ಇತ್ಯಾದಿ ಸುಮಾರು 40 ಲಕ್ಷ ರು.ಗಳ ಅಂದಾಜುಪಟ್ಟಿ ತಯಾರಿಸಿ, ಟೆಂಡರ್ ಕರೆದು, ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ರಸ್ತೆ ಕಾಮಗಾರಿಗೆ ಸಂಬಂಧಿಸಿ ನಗರಸಭೆಯ ಪೌರಾಯುಕ್ತರು ಸದಸ್ಯರ ಕ್ಷಮೆ ಯಾಚಿಸಿದ ಘಟನೆ ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರದ ಅಂಬಲಪಾಡು ವಾರ್ಡಿನ ಕೆಲವು ರಸ್ತೆಗಳಿಗೆ ಮೂರನೇ ವ್ಯಕ್ತಿಯೊಬ್ಬರ ಶಿಫಾರಸಿನ ಮೇರೆಗೆ ನಗರಸಭೆಯ ಅಧಿಕಾರಿಗಳು ಡಾಂಬರೀಕರಣ, ಚರಂಡಿ ನಿರ್ಮಾಣ ಇತ್ಯಾದಿ ಸುಮಾರು 40 ಲಕ್ಷ ರು.ಗಳ ಅಂದಾಜುಪಟ್ಟಿ ತಯಾರಿಸಿ, ಟೆಂಡರ್ ಕರೆದು, ಕಾಮಗಾರಿ ನಡೆಸಿದ್ದಾರೆ. ಆದರೆ ಈ ವಾರ್ಡಿನ ಜನರ ಪ್ರತಿನಿಧಿಯಾಗಿರುವ ತನ್ನ ಗಮನಕ್ಕೆ ಈ ವಿಷಯವನ್ನು ತಂದಿಲ್ಲ, ತನ್ನನ್ನು ಕತ್ತಲಲ್ಲಿಟ್ಟು ಅಧಿಕಾರಿಗಳು ತಮಗಿಷ್ಟದಂತೆ ನಡೆದುಕೊಳ್ಳುತಿದ್ದಾರೆ ಎಂದು ಈ ವಾರ್ಡಿನ ಸದಸ್ಯ ಹರೀಶ್ ಶೆಟ್ಟಿ ಅವರು ದಾಖಲೆ ಸಹಿತ ಸಭೆಯಲ್ಲಿ ಆರೋಪಿದರು.

ಇದಕ್ಕೆ ಶಾಸಕ ಯಶ್ಪಾಲ್ ಸುವರ್ಣ ಅವರೂ ದನಿಗೂಡಿಸಿ, ವಾರ್ಡಿನ ಸದಸ್ಯರ ಶಿಫಾರಸು ಇಲ್ಲದೇ ಯಾರೋ ಮೂರನೇ ವ್ಯಕ್ತಿಯ ಶಿಫಾರಸಿಗೆ ಹೇಗೆ ಮಂಜೂರಾತಿ ನೀಡಿದಿರಿ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪೌರಾಯುಕ್ತರು ನನ್ನ ಟೇಬಲಿಗೆ ದಿನಕ್ಕೆ ನೂರಾರು ಫೈಲುಗಳು ಮಂಜೂರಾತಿಗೆ ಬರುತ್ತವೆ, ಯಾರು ಶಿಫಾರಸು ಮಾಡಿದ್ದು ಎಂದು ನೋಡುವುದಕ್ಕಾಗುವುದಿಲ್ಲ. ಹಾಗೇ ಈ ರಸ್ತೆ ಕಾಮಗಾರಿಯ ಫೈಲಿಗೂ ಕೂಡ ಮಂಜೂರಾತಿ ನೀಡಿರಬಹುದು, ಕಣ್ತಪ್ಪಿನಿಂದ ಹೀಗೆ ಆಗಿದೆ ಎಂದರು.

ಪೌರಾಯುಕ್ತರು ಕಣ್ತಪ್ಪಿ ಆಗಿದೆ ಎಂದದ್ದಕ್ಕೆ ಶಾಸಕರು ಮತ್ತು ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಪೌರಾಯುಕ್ತರು ನನ್ನಿಂದ ತಪ್ಪಾಗಿದೆ, ಕ್ಷಮೆ ಕೇಳುತ್ತೇನೆ, ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ಇದೇ ರೀತಿ ಶಿರಿಬೀಡು ವಾರ್ಡಿನ ರಾಮಮನೋಹರ ರಸ್ತೆಯಲ್ಲಿ ಸೆಟ್ ಬ್ಯಾಕ್ ಇಲ್ಲದೆ, ರಸ್ತೆಯನ್ನು ಅತಿಕ್ರಮಿಸಿ ಕಟ್ಟಲಾಗಿರುವ ಬಹುಮಹಡಿ ಕಟ್ಟಡಕ್ಕೆ ಅನುಮತಿ ನೀಡಿರುವ, ಮಸೀದಿ ರಸ್ತೆಯಲ್ಲಿ ಹಿಂದೆ ಅಕ್ರಮವಾಗಿ ಕಟ್ಟಲಾಗಿದ್ದ ಹೊಟೇಲ್ ಕಟ್ಟಡವನ್ನು ನಗರಸಭೆಯಿಂದಲೇ ತೆರವುಗೊಳಿಸಲಾಗಿದ್ದು, ಈಗ ಮತ್ತೆ ಅದೇ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದಲೇ ಪರವಾನಗಿ ನೀಡಿರುವ ಬಗ್ಗೆ ವಾರ್ಡಿನ ಸದಸ್ಯ ಟಿ.ಜಿ.ಹೆಗ್ಡೆ ಅವರು ದಾಖಲೆಗಳೊಂದಿಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಚಿಟ್ಪಾಡಿ ವಾರ್ಡಿನಲ್ಲಿ ಅಮೆರಿಕ ಮೂಲದ ಸಂಸ್ಥೆಯೊಂದು ವಾಸ್ತವ್ಯಕ್ಕೆ ಭೂಪರಿವರ್ತನೆಯಾದ ಭೂಮಿಯಲ್ಲಿ ವಾಣಿಜ್ಯ ಕಟ್ಟಡವನ್ನು ಕಟ್ಟುವುದಕ್ಕೆ ಅನುಮತಿ ನೀಡಿರುವ ಬಗ್ಗೆ ಮತ್ತು ಈ ಕಟ್ಟಡಕ್ಕೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಗರಿಷ್ಟ ಅನುದಾನಕ್ಕೆ ಶಿಫಾರಸು ಮಾಡಿರುವ ಬಗ್ಗೆ ದಾಖಲೆಗಳೊಂದಿಗೆ ಆರೋಪಿಸಿದರು.

ಕಳೆದ 15 ತಿಂಗಳಿಂದ ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಅಧಿಕಾರ ದುರುಪಯೋಗ ನಡೆಸಿದ್ದಾರೆ, ಈ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ ಎಂದು ನಗರಸಭೆಯ ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಎಚ್ಚರಿಕೆ ನೀಡಿದರು.

ಈ ಎಲ್ಲ ಆರೋಪಗಳಿಗೆ ಪೌರಾಯುಕ್ತರು ಮತ್ತು ಸಂಬಂಧಿತ ಅಧಿಕಾರಿಗಳು ಉತ್ತರಿಸುವುದಕ್ಕೆ ತಡವರಿಸಿದರು. ತೀವ್ರ ವಾದ, ವಿರೋಧ, ಪ್ರತಿವಾದಗಳ ನಂತರ ಈ ಕಟ್ಟಡಗಳ ನಿರ್ಮಾಣ ಕಾನೂನು ಉಲ್ಲಂಘನೆಯಾಗಿದ್ದರೆ ತೆರವುಗೊಳಿಸುವುದಾಗಿ ಸಭೆಗೆ ಭರವಸೆ ನೀಡಿದರು.

ಈ ನಡುವೆ ವಿಪಕ್ಷ ಕಾಂಗ್ರೆಸ್ ಸದಸ್ಯರಾದ ರಮೇಶ್ ಕಾಂಚನ್, ಅಮೃತ ಕೃಷ್ಣಮೂರ್ತಿ ಹಾಗೂ ಆಡಳಿತ ಪಕ್ಷ ಬಿಜೆಪಿ ಸದಸ್ಯರಾದ ಗಿರೀಶ್ ಕಾಂಚನ್, ವಿಜಯ ಕೊಡವೂರು ಮಧ್ಯೆ ವಾಗ್ವಾದ ಕೂಡ ನಡೆಯಿತು...............

ಪೊಲೀಸ್ ರಾಜ್ ನಡೆಯುತ್ತಿದೆಯೇ?

ಬಿಜೆಪಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅವರು, ರಾಹೆ ಪಕ್ಕದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಶೆಡ್ ತೆರವಿಗೆ ಕಳುಹಿಸಲಾಗಿದ್ದ ನಗರಸಭೆ ಜೆಸಿಬಿಯನ್ನು ಪೊಲೀಸರು ಜಫ್ತುಗೊಳಿಸಿದ್ದಾರೆ ಎಂದರು.

ನಗರಸಭೆಯ ಕಾರ್ಯಾಚರಣೆಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸರು, ಕಾನೂನು ಉಲ್ಲಂಘಿಸಿದವರಿಗೆ ರಕ್ಷಣೆ ನೀಡಿದ್ದಾರೆ ಎಂದರೆ ಇಲ್ಲೇನೂ ಪೊಲೀಸ್ ರಾಜ್ ನಡೆಯುತ್ತಿದೆಯೇ ಎಂದು ಅಧ್ಯಕ್ಷ ಪ್ರಭಾಕರ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆಯ ಆಸ್ತಿಯನ್ನು ಅಕ್ರಮವಾಗಿ ಜಪ್ತು ಮಾಡಿ, 15 ಸಾವಿರ ರು. ದಂಡ ವಿಧಿಸಿದ ಪೊಲೀಸ್ ಕ್ರಮದ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.