ಸಾರಾಂಶ
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಸೃಷ್ಟಿ ನೃತ್ಯ ಕಲಾ ಕುಟೀರಗಳ ಜಂಟಿ ಆಶ್ರಯದಲ್ಲಿ ‘ರಾಷ್ಟ್ರ ಮಟ್ಟದ ನೃತ್ಯೋತ್ಸವ- 2024’ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಸೃಷ್ಟಿ ನೃತ್ಯ ಕಲಾ ಕುಟೀರಗಳ ಜಂಟಿ ಆಶ್ರಯದಲ್ಲಿ ‘ರಾಷ್ಟ್ರ ಮಟ್ಟದ ನೃತ್ಯೋತ್ಸವ- 2024’ ನ.16 ಮತ್ತು 17ರಂದು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೃಷ್ಟಿ ನೃತ್ಯ ಕಲಾ ಕುಟೀರದ ಮುಖ್ಯಸ್ಥೆ ಮಂಜರಿ ಚಂದ್ರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ಉದ್ಘಾಟಿಸಲಿದ್ದಾರೆ. ಆ ಬಳಿಕ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಹಾಗೂ ಓಪನ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಮಂಜುನಾಥ್ ಪುತ್ತೂರು ತಾಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ ಎಂದರು.ಮಧ್ಯಾಹ್ನ 2ಗಂಟೆಗೆ ರಾಷ್ಟ್ರಮಟ್ಟದ ಸಮೂಹ ಭರತನಾಟ್ಯ ಸ್ಪರ್ಧೆ ನಡೆಯಲಿದ್ದು, ಸಂಜೆ 4 ಗಂಟೆಗೆ ಸ್ಪರ್ಧೆಯ ಬಹುಮಾನ ವಿತರಣೆ ನಡೆಸಲಾಗುವುದು. ಸಂಜೆ 7ರಿಂದ ಸೃಷ್ಟಿ ನೃತ್ಯ ಕಲಾಕುಟೀರದ ಕಿರಿಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು. ನ.17ರಂದು ಬೆಳಗ್ಗೆ 9.30ಕ್ಕೆ ಶುಭಾಮಣಿ ಚಂದ್ರಶೇಖರ್ ಅವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಬೆಳಗ್ಗೆ 10.25ಕ್ಕೆ ಕೇರಳದ ನೃತ್ಯಪಟು ಆನಂದ್ ಸಿ.ಎಸ್., 11.20ಕ್ಕೆ ನವ್ಯಶ್ರೀ ಹಾಗೂ ಶ್ರೀಮ ಉಪಾಧ್ಯಾಯ, ಮಧ್ಯಾಹ್ನ 1.30ಕ್ಕೆ ಮೃದುಲಾ ರೈ ಅವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿ. ರಾಧಿಕಾ ಶೆಟ್ಟಿ ಅವರ ಸಾರಥ್ಯದಲ್ಲಿ ‘ನೃತ್ಯ ದಾಸೋಹಂ’ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಸಮಾರೋಪ ಸಮಾರಂಭವು ನಡೆಯಲಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಸೃಷ್ಠಿ ಸಂಸ್ಥೆಯ ಕಲಾವಿದೆಯಾದ ಅಕ್ಷತಾ, ಸ್ಮೃತಿ, ಇಳಾ ಶೆಟ್ಟಿ ಉಪಸ್ಥಿತರಿದ್ದರು.