ಸಾರಾಂಶ
ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಆಗಿದ್ದ ವಿಕ್ರಮ್ ಗೌಡನ ಎನ್‌ಕೌಂಟರ್ ನಡೆದ ಮನೆಯ ಮಾಲೀಕನನ್ನು ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಾರ್ಕಳ : ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಆಗಿದ್ದ ವಿಕ್ರಮ್ ಗೌಡನ ಎನ್‌ಕೌಂಟರ್ ನಡೆದ ಮನೆಯ ಮಾಲೀಕನನ್ನು ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ಎನ್‌ಕೌಂಟರ್ ನಡೆದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಮನೆಯ ಮಾಲೀಕ ಜಯಂತ ಗೌಡರನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದರು. ಈ ಮಧ್ಯೆ, ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಕಬ್ಬಿನಾಲೆ, ಕೂಡ್ಲು ಗ್ರಾಮಸ್ಥರು ಹೆಬ್ರಿ ಠಾಣೆಗೆ ಮುತ್ತಿಗೆ ಹಾಕಿ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಸಂಜೆ 3 ಗಂಟೆಗೆ ಪೊಲೀಸರು ಗೌಡರನ್ನು ಬಿಡುಗಡೆ ಮಾಡಿದರು.
ಈ ಮಧ್ಯೆ, ನಾಡ್ಪಾಲು ಗ್ರಾಮದಲ್ಲೀಗ ಅವ್ಯಕ್ತ ಆತಂಕ ಮಡುಗಟ್ಟಿದೆ. ಜಯಂತ ಗೌಡ, ಪತ್ನಿ ಗಿರಿಜಾ ಇಲ್ಲಿಯೇ ಸಮೀಪದ ಪುಳ್ಳಂತಬೆಟ್ಟುವಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಸೋಮವಾರದ ನಂತರ ಇಲ್ಲಿನ ಜಯಂತ ಗೌಡ, ನೆರೆಯ ಸುಧಾಕರ ಗೌಡ ಮತ್ತು ನಾರಾಯಣ ಗೌಡರ ಮನೆಗಳು ಪಾಳು ಬಿದ್ದಿವೆ, ಮನೆಗಳಿಗೆ ಬೀಗವೂ ಹಾಕಿಲ್ಲ. ಅವರು ಸಾಕಿದ್ದ ನಾಯಿಗಳು ಹೊಟ್ಟೆಗಿಲ್ಲದೆ ಮನೆ ಮುಂದೆ ಕಂಗಾಲಾಗಿವೆ. ಗೂಡಿನಿಂದ ಹೊರಗೆ ಬಿಟ್ಟ ಕೋಳಿಗಳು ಅಲ್ಲಿಲ್ಲಿ ಓಡಾಡುತ್ತಿವೆ. ಮೇಯಲೆಂದು ಗುಡ್ಡೆಗೆ ಬಿಟ್ಟಿದ್ದ ದನಗಳು ಮನೆ ಬಳಿ ಬಂದು ಕಟ್ಟಿಹಾಕಬೇಕಾಗಿದ್ದ ಮನೆಯ ಯಜಮಾನಿಯನ್ನು ಕಾಯುತ್ತಿವೆ.
ಸೋಮವಾರದಿಂದ ಇಲ್ಲಿನ ಕಬ್ಬಿನಾಲೆ, ಮುದ್ರಾಡಿ. ಪೀತಾಬೈಲು, ಕೂಡ್ಲು ಪ್ರದೇಶಗಳಲ್ಲಿ ಜನರ ಜೀವನವೇ ಸ್ಥಗಿತಗೊಂಡಂತಿದೆ. ಇಲ್ಲಿರುವ ಕೆಲವೇ ಕೆಲ ಮನೆಗಳ ಮುಂದೆ ಯಾರೂ ಬಂದು ನಿಂತರೂ ಅಲ್ಲಿನ ಜನ ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.