ಉಡುಪಿ ಪರ್ಯಾಯೋತ್ಸವದ ಸಂದರ್ಭಶನಿವಾರ ರಾತ್ರಿಯಿಡೀ ಪರ್ಯಾಯ ಮೆರವಣಿಗೆಯನ್ನು ವೀಕ್ಷಿಸಲು ಬಂದ 40 ಸಾವಿರಕ್ಕೂ ಅಧಿಕ ಮಂದಿಗೆ ನಗರಸಭೆಯ ಬಳಿ ಅನ್ನ ಸಂತರ್ಪಣೆ ನಡೆಯಿತು.

ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಪ್ರತಿನಿತ್ಯ ನಾಲ್ಕೈದು ಸಾವಿರ ಮಂದಿ ಭಕ್ತರಿಗೆ, ಯಾತ್ರಾರ್ಥಿಗಳಿಗೆ ಕೃಷ್ಣಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ. ಆದರೆ 2 ವರ್ಷಗಳಿಗೊಮ್ಮೆ ಪರ್ಯಾಯೋತ್ಸವದ ಎರಡು ದಿನಗಳ ಕಾಲ ಮಾತ್ರ ಲಕ್ಷಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ, ಪಾಯಸ, ಸಿಹಿ ಭಕ್ಷಗಳ ವಿತರಣೆ ಭರ್ಜರಿಯಾಗಿ ನಡೆಯುತ್ತದೆ. ಅದಕ್ಕಾಗಿ ಒಂದು ವಾರದಿಂದ ಬೃಹತ್ ಹೊರೆಕಾಣಿಕೆ ಸಲ್ಲಿಕೆ ನಡೆಸಲಾಗುತ್ತದೆ.

ಶನಿವಾರ ರಾತ್ರಿಯಿಡೀ ಪರ್ಯಾಯ ಮೆರವಣಿಗೆಯನ್ನು ವೀಕ್ಷಿಸಲು ಬಂದ 40 ಸಾವಿರಕ್ಕೂ ಅಧಿಕ ಮಂದಿಗೆ ನಗರಸಭೆಯ ಬಳಿ ಅನ್ನ ಸಂತರ್ಪಣೆ ನಡೆಯಿತು. ಇಂದು ಮಧ್ಯಾಹ್ನ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನ ಸಂತರ್ಪಣೆಗೆ ನೂರಾರು ಮಂದಿ ಬಾಣಸಿಗರು ಮತ್ತು ಸಹಾಯಕರು ಸಿದ್ದತೆಗಳನ್ನು ನಡೆಸಿದ್ದಾರೆ. ಈ ಅನ್ನಪ್ರಸಾದ ತಯಾರಿಕೆಗೆ ಶನಿವಾರ ಸಂಜೆ ಅಷ್ಟ ಮಠಾಧೀಶರು ಸೇರಿ ಪ್ರಾರ್ಥನೆ ನಡೆಸಿ ಮುಹೂರ್ತ ನಡೆಸಿದರು. ನಂತರ ನೂರಾರು ಮಂದಿ ಮಹಿಳೆಯರು ಮತ್ತು ಅಡುಗೆ ಸಹಾಯಕರು ತರಕಾರಿಗಳನ್ನು ಹಚ್ಚುವ ಕೆಲಸವನ್ನಾರಂಭಿಸಿದರು.

ಕೃಷ್ಣಮಠ ಮತ್ತು ಮಟ್ಟು ಗುಳ್ಳ: ಈ ಹೊರೆಕಾಣಿಕೆ ಸಲ್ಲಿಕೆಯಲ್ಲಿ ಉದ್ಯಾವರ ಸಮೀಪದ ಮಟ್ಟು ಗ್ರಾಮದಿಂದ ಬರುವ ಮಟ್ಟಗಳ ಹೊರೆಕಾಣಿಗೆ ಬಹಳ ವೈಶಿಷ್ಟ್ಯವಾದುದು. ಮಟ್ಟು ಗ್ರಾಮದ ಜನರು ಸಂಕಷ್ಟದಲ್ಲಿದ್ದಾಗ ಕೃಷ್ಣಮಠದ ಶ್ರೀ ವಾದಿರಾಜ ತೀರ್ಥರು ಹಿಡಿ ಮರಳನ್ನು ಮಂತ್ರಿಸಿ ಅವುಗಳನ್ನು ಗುಳ್ಳ (ಬದನೆ)ದ ಬೀಜಗಳನ್ನಾಗಿ ಪರಿವರ್ತಿಸಿ ನೀಡಿದರು. ಅದಕ್ಕಾಗಿ ಆ ಪ್ರದೇಶದಲ್ಲಿ ಯಥೇಚ್ಚವಾಗಿ ಬೆಳೆಸಲಾಗುವ ಬದನೆಯನ್ನು ಮಟ್ಟುಗುಳ್ಳ ಎಂದು ಕರೆಯುತ್ತಾರೆ. ಅಂದಿನಿಂದ ಇಂದಿನವರೆಗೂ ಕೃಷ್ಣಮಠದ ನಿತ್ಯ ಬಳಕೆಯಲ್ಲಿ ಮಟ್ಟುಗುಳ್ಳಕ್ಕೆ ವಿಶೇಷ ಸ್ಥಾನವಿದೆ. ಪ್ರತಿ ಪರ್ಯಾಯದಂತೆ, ಶನಿವಾರ ಭಾರಿ ಪ್ರಮಾಣದ ಮಟ್ಟುಗುಳ್ಳದ ಹೊರೆಕಾಣಿಕೆ ನಡೆಯಿತು.