ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಯಾವುದೇ ಗೊಂದಲ ಇಲ್ಲದೆ ಅದ್ದೂರಿಯಾಗಿ ನಡೆದಿದೆ. ಹಾಗಿರುವಾಗ ಧಾರ್ಮಿಕ ಆಚರಣೆಯ ಭಾಗವಾಗಿ ಅಲ್ಲಿನ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿರುವುದನ್ನು ವಿರೋಧಿಸುತ್ತಿರುವುದು ಅನಪೇಕ್ಷಿತ ವಿಚಾರವಾಗಿದ್ದು, ಅದನ್ನು ಸರ್ಕಾರವೇ ವಿವಾದಕ್ಕೆ ಎಳೆಯುವುದು ಸರಿಯಲ್ಲ

ಮಂಗಳೂರು: ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಯಾವುದೇ ಗೊಂದಲ ಇಲ್ಲದೆ ಅದ್ದೂರಿಯಾಗಿ ನಡೆದಿದೆ. ಹಾಗಿರುವಾಗ ಧಾರ್ಮಿಕ ಆಚರಣೆಯ ಭಾಗವಾಗಿ ಅಲ್ಲಿನ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿರುವುದನ್ನು ವಿರೋಧಿಸುತ್ತಿರುವುದು ಅನಪೇಕ್ಷಿತ ವಿಚಾರವಾಗಿದ್ದು, ಅದನ್ನು ಸರ್ಕಾರವೇ ವಿವಾದಕ್ಕೆ ಎಳೆಯುವುದು ಸರಿಯಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನಲ್ಲಿ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಉತ್ಸವದ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭ ಉಡುಪಿ ಜಿಲ್ಲಾಧಿಕಾರಿಗಳು ಭಗವಾಧ್ವಜ ಹಾರಿಸಿರುವುದಕ್ಕೆ ಮಾಜಿ ಸಚಿವ ರಮಾನಾಥ ರೈಗಳು ಆಕ್ಷೇಪ ಎತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸರ್ಕಾರದ ಭಾಗವಾಗಿದ್ದು, ಈ ವಿಚಾರದಲ್ಲಿ ಡಿಸಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಹಿಂದಿನ ಕಮಿಷನರ್‌ ಅವರು ಅಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕಿದ್ದರು. ಹಿಂದುಯೇತರರು ಹೊರೆಕಾಣಿಕೆ ಸಮರ್ಪಣೆ ಮಾಡಿದ್ದಾರೆ. ಇಂತಹ ಸಾಮರಸ್ಯದ ವಿಚಾರಗಳನ್ನು ವಿವಾದಕ್ಕೆ ಎಳೆಯಬಾರದು ಎಂದರು. ಉಡುಪಿಲಿ ಸಮಾನ ಸತ್ಕಾರ:

ಈ ಬಾರಿ ಉಡುಪಿ ಪರ್ಯಾಯ ಉತ್ಸವದಲ್ಲಿ ಎಲ್ಲ ಸ್ವಾಮೀಜಿಗಳಿಗೂ ಸಮಾನತೆ ರೂಪಿಸಲಾಗಿದೆ. ಈ ಹಿಂದೆ ಆಯಾ ಸ್ವಾಮೀಜಿಯ ಸಮುದಾಯದವರಿಗೆ ಮಾತ್ರ ಅವಕಾಶ ಇತ್ತು. ಈ ಬಾರಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಎಲ್ಲ ಸ್ವಾಮೀಜಿಗಳನ್ನೂ ಸಮಾನವಾಗಿ ಸತ್ಕರಿಸಿರುವುದು ಸಂತಸ ತಂದಿದೆ ಎಂದರು.

ಪಂಚ ಪರಿವರ್ತನೆಗಳ ಅನುಷ್ಠಾನಕ್ಕೆ ಹಿಂದು ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಹಲವು ಕಡೆ ಸಮಾಜೋತ್ಸವ ನಡೆದಿದ್ದು, ಸಮಾಜದಲ್ಲಿನ ತಾರತಮ್ಯ ನಿವಾರಣೆಗೆ ಶಕ್ತಿಮೀರಿ ಶ್ರಮಿಸಲಾಗುತ್ತಿದೆ. ಶೇ. 80ರಷ್ಟು ಪರಿವರ್ತನೆಯನ್ನು ಸಮಾಜದಲ್ಲಿ ತರುವಲ್ಲಿ ಸಫಲರಾಗಿದ್ದೇವೆ. ಈ ಮೊದಲು ಸ್ವಾಮೀಜಿಗಳ ಪಾದ ಸೇವೆಯನ್ನು ಮೇಲ್ವರ್ಗದವರು ಮಾಡುತ್ತಿದ್ದರೆ, ಈಗ ಸಾಮಾನ್ಯರೂ ಪಾದಸೇವೆ ಮಾಡುತ್ತಿದ್ದಾರೆ. ಇದು ಸಮಾಜದಲ್ಲಿ ಕಾಣುತ್ತಿರುವ ಬದಲಾವಣೆಯಾಗಿದೆ ಎಂದರು.