ಭಗವದ್ ಧ್ವಜದ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮ ನಂಬಿಕೆ ಮತ್ತು ಬದ್ದತೆಯನ್ನು ಸ್ಪಷ್ಟಪಡಿಸಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ
ಉಡುಪಿ: ಭಗವದ್ ಧ್ವಜದ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮ ನಂಬಿಕೆ ಮತ್ತು ಬದ್ದತೆಯನ್ನು ಸ್ಪಷ್ಟಪಡಿಸಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಶಿರೂರು ಮಠದ ಶ್ರೀಗಳ ಪುರಪ್ರವೇಶಕ್ಕೆ ಮತ್ತು ಪರ್ಯಾಯ ಮೆರವಣಿಗೆಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಭಗವದ್‌ಧ್ವಜವನ್ನು ಬೀಸುವ ಮೂಲಕ ಚಾಲನೆ ನೀಡಿದ್ದರ ಬಗ್ಗೆ ಕಾಂಗ್ರೆಸ್ ನಾಯಕರ ಆಕ್ಷೇಪಕ್ಕೆ ಯಶ್‌ಪಾಲ್ ಸುವರ್ಣ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ನಾಯಕಪ ಭಗವದ್‌ಧ್ವಜವನ್ನು ಬಿಜೆಪಿಯ ಧ್ವಜ ಎಂಬಂತೆ ಟೀಕಿಸುತಿದ್ದಾರೆ, ಭಗವದ್‌ಧ್ವದ ಹಿಂದೂ ಧರ್ಮದ ಪವಿತ್ರ ಸಂಕೇತವಾಗಿದೆ. ಈ ಧ್ವಜದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಂಬಿಕೆ ಇದೆಯೋ ಇಲ್ಲವೋ ಮೊದಲು ಸ್ಪಷ್ಟಪಡಿಸಲಿ ಎಂದು ಅವರು ಸವಾಲು ಹಾಕಿದರು.
ಡಿಸಿ ಅವರು ಭಗವದ್ ಧ್ವಜವನ್ನು ಕೈಯಲ್ಲಿ ಹಿಡಿದದ್ದನ್ನು ಕಾಂಗ್ರೆಸಿಗರು ಪಾಕಿಸ್ತಾನದ ಧ್ವಜವನ್ನು ಹಿಡಿದರವಂತೆ ಬಿಂಬಿಸುತ್ತಿದ್ದಾರೆ. ಅಂದು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇದ್ದಿದ್ದರೂ ಅವರೂ ಇದೇ ಭಗವದ್‌ಧ್ವಜವನ್ನು ಕೈಯಲ್ಲಿ ಹಿಡಿದು ಮೆರವಣಿಗೆಗೆ ಚಾಲನೆ ನೀಡುತ್ತಿದ್ದರು. ಆದರೂ ಕಾಂಗ್ರೆಸ್ ನಾಯಕರು ಅವರನ್ನು ವಜಾ ಮಾಡುವಂತೆ ಅಥವಾ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದರಾ ಎಂದು ಯಶ್‌ಪಾಲ್ ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ನಾಯಕರು ಇನ್ನಾದರೂ ಅನವಶ್ಯಕವಾಗಿ ಭಗವದ್ ಧ್ವಜದ ಬಗ್ಗೆ ರಾಜಕೀಯ ಮಾಡುವುದನ್ನು ಬಿಡಲಿ ಎಂದು ಹೇಳಿದ್ದಾರೆ.