ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಪೊಡವಿಗೊಡೆಯನ ನಾಡು ಉಡುಪಿಯಲ್ಲಿ 2026ರ ಜ.18ರಿಂದ 2028ರ ಜ.18ರವರೆಗೆ ನಡೆಯಲಿರುವ ಶಿರೂರು ಮಠದ ಪರ್ಯಾಯೋತ್ಸವದ ಪೂರ್ವಭಾವಿ ನಾಲ್ಕು ಮುಹೂರ್ತಗಳ ಪೈಕಿ 2ನೇ ಮುಹೂರ್ತ ‘ಅಕ್ಕಿ ಮುಹೂರ್ತ’ 6ರಂದು ನಡೆಯಲಿದೆ.ಈ ಬಗ್ಗೆ ಭಾವಿ ಪರ್ಯಾಯ ಪೀಠಾಧೀಶ, ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಉಡುಪಿಯ ಶ್ರೀ ಕೃಷ್ಣ ಅನ್ನಬ್ರಹ್ಮನೆಂದೆ ಖ್ಯಾತಿ ಪಡೆದಿದ್ದಾನೆ. ಇಲ್ಲಿ ಅನ್ನದಾನಕ್ಕೆ ಬಹಳ ಮಹತ್ವ ಇದೆ. ಈ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ಅನ್ನದಾನಕ್ಕೆ ಅಗತ್ಯ ಅಕ್ಕಿ ಸಂಗ್ರಹಿಸುವ ಈ ಮುಹೂರ್ತಕ್ಕೂ ವಿಶೇಷ ಪ್ರಾಧಾನ್ಯತೆ ಇದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ಅಷ್ಟ ಮಠಾಧೀಶರೂ ಭಾಗವಹಿಸುತ್ತಾರೆ. ಉಡುಪಿಯ ಎಲ್ಲಾ ನಾಗರಿಕರು ಇದರಲ್ಲಿ ಭಾಗವಹಿಸಿ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದರು.ಶಿರೂರು ಮಠದ ದಿವಾಣ ಡಾ. ಉದಯಕುಮಾರ್ ಸರಳತ್ತಾಯ ಮಾತನಾಡಿ, ಅಂದು ಮುಂಜಾನೆ 6 ಗಂಟೆಗೆ ಎಲ್ಲಾ ಮಠಗಳಿಗೆ ತೆರಳಿ ಆಯಾ ಮಠಾಧೀಶರನ್ನು ಮುಹೂರ್ತಕ್ಕೆ ಬರ ಮಾಡಿಕೊಳ್ಳಲಾಗುತ್ತದೆ, 9 ಗಂಟೆಗೆ ಶಿರೂರು ಮಠದಲ್ಲಿ ಶ್ರೀ ವಿಠಲ ದೇವರಿಗೆ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತದೆ, ನಂತರ ರಥಬೀದಿಯಲ್ಲಿ ಅನಂತೇಶ್ವರ - ಚಂದ್ರಮೌಳೀಶ್ವರ, ಕೃಷ್ಣಮಠದಲ್ಲಿ ಶ್ರೀ ಕೃಷ್ಣ - ಮುಖ್ಯಪ್ರಾಣ, ಮಧ್ವಾಚಾರ್ಯರ ಸನ್ನಿಧಾನ, ಸಿಂಹಾಸನ, ಬೃಂದಾವನ, ನವಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದರು.
ಅಲ್ಲಿಂದ ಸಂಸ್ಕೃತ ಕಾಲೇಜು ವೃತ್ತಕ್ಕೆ ತೆರಳಿ, ಅಲ್ಲಿ ಸಂಗ್ರಹಿಸಲಾದ ಅಕ್ಕಿಯ ಮುಡಿಗಳನ್ನು ಚಿನ್ನದ ಪಾಲಕಿಯಲ್ಲಿಟ್ಟುಕೊಂಡು ರಥಬೀದಿಗೆ ಪ್ರದಕ್ಷಿಣೆ ತಂದು, 10.45ಕ್ಕೆ ಶಿರೂರು ಮಠ ಪ್ರವೇಶ ಮಾಡಲಾಗುತ್ತದೆ. 11.10 ಸುಮುಹೂರ್ತದಲ್ಲಿ ಎಲ್ಲಾ ಮಠಾಧೀಶರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಮುಷ್ಟಿ ಅಕ್ಕಿ ಸಮರ್ಪಣೆಯ ಮೂಲಕ ಅಕ್ಕಿ ಮುಹೂರ್ತ ನಡೆಸಲಾಗುತ್ತದೆ. ಭಕ್ತರು ಕೊಟ್ಟದ್ದನ್ನು ಶ್ರೀ ಕೃಷ್ಣ ಸ್ವೀಕಾರ ಮಾಡುತ್ತಾನೆ ಎಂಬ ಪರಿಕಲ್ಪನೆಯಡಿ ಈ ಮುಹೂರ್ತ ನಡೆಸಲಾಗುತ್ತದೆ ಎಂದರು.ಶಾಸಕ ಯಶಪಾಲ್ ಸುವರ್ಣ ಮತ್ತು ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಉಡುಪಿಯ ಪರ್ಯಾಯ ಎಂದರೆ ನಾಡಹಬ್ಬ, ಇದು ಜನರ ಹಬ್ಬ, ಆದ್ದರಿಂದ ಉಡುಪಿಯ ಜನರೆಲ್ಲರೂ ಈ ಮುಹೂರ್ತದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ಸಂಧ್ಯಾ ರಮೇಶ್, ಮೋಹನ್ ಭಟ್ ಮುಂತಾದವರಿದ್ದರು..................ಅನ್ನ ನೈವೇದ್ಯವೇ ಶ್ರೇಷ್ಠಗತಿಸಿದ ನಮ್ಮ ಹಿರಿಯರಿಗೂ ಅನ್ನದ ಪಿಂಡಗಳನ್ನು ಅರ್ಪಿಸಿ ಅವರನ್ನು ಸಂತುಷ್ಟಗೊಳಿಸುವುದು ನಮ್ಮ ಸಂಪ್ರದಾಯವಾಗಿದೆ. ಅದೇ ರೀತಿ ಉಡುಪಿ ಕೃಷ್ಣನಿಗೂ ಅನ್ನದ ಅಂಬಲಿ ಅರ್ಪಿಸುವುದು ಪದ್ಧತಿಯಾಗಿದೆ. ಅನ್ನ ನೈವೇದ್ಯ ಅತ್ಯಂತ ಶ್ರೇಷ್ಠವಾದುದು. ಆದ್ದರಿಂದ ಕೃಷ್ಣನ ನೈವೇದ್ಯದ ರೂಪದಲ್ಲಿ ಮಾಡುವ ಅನ್ನದಾನಕ್ಕೆ ಬೇಕಾದ ಅಕ್ಕಿ ತಂದೊಪ್ಪಿಸುವುದು ಶ್ರೇಷ್ಠವಾಗಿದೆ. ಇದರಲ್ಲಿ ಎಲ್ಲರೂ ಭಾಗವಹಿಸಿ ಕೃಷ್ಣನ ಅನುಗ್ರಹ ಪಡೆಯಬೇಕು ಎಂದು ಭಾವಿ ಪರ್ಯಾಯ ಶ್ರೀಗಳು ಕರೆ ನೀಡಿದರು.
........................ಇದು 2ನೇ ಮುಹೂರ್ತ2 ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯೋತ್ಸವಕ್ಕೆ ಪೂರ್ವಬಾವಿ ಸಿದ್ಧತೆಯಾಗಿ 4 ಮುಹೂರ್ತಗಳು ನಡೆಯುತ್ತವೆ. ಕೃಷ್ಣಮಠದಲ್ಲಿ ನಿತ್ಯ ಸಾವಿರಾರು ಮಂದಿಗೆ ಅನ್ನದಾನಕ್ಕೆ ಪೂರಕವಾಗಿ ಈ ಮುಹೂರ್ತಗಳನ್ನು ನಡೆಸಲಾಗುತ್ತದೆ. ಅದರಂತೆ ಶಿರೂರು ಮಠದ ಭಾವಿ ಪರ್ಯಾಯೋತ್ಸವದ ಮೊದಲ ಮುಹೂರ್ತ ‘ಬಾಳೆ ಮುಹೂರ್ತ’ ಈಗಾಗಲೇ ಸಂಪನ್ನಗೊಂಡಿದೆ. ಇದೀಗ ಅಕ್ಕಿ ಮುಹೂರ್ತಕ್ಕೆ ಸಿದ್ಧತೆಗಳಾಗಿವೆ. ಮುಂದೆ ಭತ್ತ ಮಹೂರ್ತ ಮತ್ತು ಕಟ್ಟಿಗೆ ಮುಹೂರ್ತಗಳು ನಡೆಯಲಿವೆ.