ಉಡುಪಿ: ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಸೇವೆಗಳ ಮೂಲಕ ದೇಶಾದ್ಯಂತ ಪ್ರಸಿದ್ಧವಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಈ ಬಾರಿ ಶ್ರೀ ಕೃಷ್ಣನ - ಶ್ರೀ ಮಧ್ವಾಚಾರ್ಯರ ಭಕ್ತಿ ಸಂದೇಶಗಳನ್ನು ಪ್ರಸಾರಗೊಳಿಸಲು ರಾಜಧಾನಿ ದೆಹಲಿಯಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವುದು ಅತ್ಯಂತ ಸಕಾಲಿಕವಾಗಿದೆ ಎಂದು ಕೇಂದ್ರ ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.‌ಶ್ರೀಗಳ 39ನೇ ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಜೋಷಿ ನವದೆಹಲಿ ವಸಂತ್ ಕುಂಜ್‌ನ ಶ್ರೀಮಠದ ಶಾಖೆ ಶ್ರೀ ಕೃಷ್ಣಧಾಮದಲ್ಲಿ ಬುಧವಾರ ಸಂಜೆ ಶ್ರೀಗಳ ಚಾತುರ್ಮಾಸ್ಯ ಸತ್ರ ಉದ್ಘಾಟಿಸಿ ಮಾತನಾಡಿದರು. ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಸ್ಮರಿಸಿದ ಅವರು, ಇಡೀ ಸಂತಕುಲಕ್ಕೆ ಆದರ್ಶರಾಗಿದ್ದ ಅವರ ಶಿಷ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥರೂ ಅದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.‌ಹಿರಿಯ ವಿದ್ವಾಂಸ ತಿರುಮಲ ಕುಲಕರ್ಣಿ ಆಚಾರ್ಯರು ಅನುವಾದಿಸಿದ ಆಚಾರ್ಯ ಮಧ್ವರ ಜೀವನ ಚರಿತ್ರೆಯ ಹಿಂದಿ ಅವತರಣಿಕೆಯನ್ನು ಪ್ರಹ್ಲಾದ್ ಜೋಶಿ ಬಿಡುಗಡೆಗೊಳಿಸಿದರು.ವಿಶ್ವಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷರೂ, ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಅಲೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ‌, ಬಿ. ವೈ. ರಾಘವೇಂದ್ರ, ದೆಹಲಿ ಮೇಯರ್ ಪರ್ವೇಶ್ ವಾಹಿ, ಮಾಜಿ ಸಂಸದ ರಮೇಶ್ ಬಿಧೂರಿ ಉಪಸ್ಥಿತರಿದ್ದರು.ಸಮಿತಿ ಪ್ರಧಾನ‌ ಕಾರ್ಯದರ್ಶಿ, ಕೇಂದ್ರೀಯ ಸಂಸ್ಕೃತ ವಿವಿ ಉಪಕುಲಪತಿ ಡಾ. ಶ್ರೀನಿವಾಸ ವರಖೇಡಿ ಪ್ರಸ್ತಾವನೆಗೈದರು.‌ ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಸುಬೋಧ್ ಚಂದ್ರ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.ಶ್ರೀಗಳನ್ನು ಸಾಲಂಕೃತ ವಾಹನದಲ್ಲಿ ಭವ್ಯ ಶೋಭಾಯಾತ್ರೆಯ ಮೂಲಕ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು. ಗುರುಪೂರ್ಣಿಮೆ ನಿಮಿತ್ತ ಶ್ರೀ ವಿಶ್ವೇಶತೀರ್ಥರ ಪಾದುಕೆಗಳಿಗೆ ಪುಷ್ಪಾರ್ಚನೆ ಹಾಗೂ ಗೋಪೂಜೆ ನೆರವೇರಿತು. ಪ್ರಧಾನಿ ‘ಏಕ್ ಪೇಡ್ ಮಾ ಕೇ ನಾಮ್’ ಕರೆಯಂತೆ ಶ್ರೀಗಳು ಮಂದಿರದ ಆವರಣದಲ್ಲಿ ಸಸಿ ನೆಟ್ಟರು.


ರಾಮರಾಜ್ಯ ಸ್ಥಾಪನೆಗೆ ಶ್ರೀಗಳ ಕರೆ: ಅನುಗ್ರಹ ಸಂದೇಶ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ರಾಮರಾಜ್ಯ ನಿರ್ಮಾಣದೆಡೆಗೆ ಇಡೀ ಸಮಾಜ ಸಕ್ರಿಯವಾಗುವಂತೆ ಕರೆನೀಡಿದರು. ಚಾತುರ್ಮಾಸ್ಯದ ಅವಧಿಯಲ್ಲಿ ದೆಹಲಿಯಲ್ಲಿ ಶ್ರೀ ಮಠದ ಒಂದಷ್ಟು ಕಾರ್ಯಚಟುವಟಿಕೆಗಳನ್ನು ವಿಸ್ತಾರಗೊಳಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿ ಎಲ್ಲರ ಸಹಕಾರ ಕೋರಿದರು.