ಸಾರಾಂಶ
ದಲಿತ ಯುವಕ ಕೃಷ್ಣನ ಶೂಟೌಟ್ ಪ್ರಕರಣವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಅವರ ತಂಡ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ. ಹೀಗಾಗಿ ಗೃಹಸಚಿವ ಪರಮೇಶ್ವರ್, ಡಿಜಿಪಿಯವರನ್ನು ಭೇಟಿ ಮಾಡಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಂತೆ ದೂರು ನೀಡುತ್ತೇವೆ ಎಂದು ಮಾವಳ್ಳಿ ಶಂಕರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದ ದಲಿತ ಯುವಕ ಕೃಷ್ಣನ ಶೂಟೌಟ್ ಪ್ರಕರಣವನ್ನು ಉಡುಪಿ ಜಿಲ್ಲೆಯ ಪೊಲೀಸರು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ. ಈ ಬಗ್ಗೆ ರಾಜ್ಯದ ಗೃಹ ಸಚಿವರಿಗೆ ದೂರು ನೀಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.ಅವರು ಭಾನುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಲಿತ ಯುವಕ ಕೃಷ್ಣನ ಶೂಟೌಟ್ ಪ್ರಕರಣವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಅವರ ತಂಡ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ. ಹೀಗಾಗಿ ಗೃಹಸಚಿವ ಪರಮೇಶ್ವರ್, ಡಿಜಿಪಿಯವರನ್ನು ಭೇಟಿ ಮಾಡಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಂತೆ ದೂರು ನೀಡುತ್ತೇವೆ ಎಂದರು.ಪೊಲೀಸರು ಈ ಭಯಾನಕ ಕೊಲೆಯ ಆರೋಪಿಗಳನ್ನು ಬಂಧಿಸುತ್ತಾರೆ ಎಂಬ ಭರವಸೆಯಿಂದ ಸಂಘಟನೆಯು ಇದುವರೆಗೆ ಪೊಲೀಸರೊಂದಿಗೆ ಸಹಕರಿಸಿ ಯಾವುದೇ ಹೋರಾಟಗಳಿಗೆ ಕರೆ ನೀಡಿರಲಿಲ್ಲ. ಆದರೆ ಪೊಲೀಸ್ ಇಲಾಖೆ ಗಾಢ ಮೌನವಹಿಸಿರುವುದನ್ನು ಖಂಡಿಸುತ್ತೇವೆ. ಪ್ರಕರಣದಲ್ಲಿ ಆರೋಪಿಯನ್ನು ಹದಿನೈದು ದಿನದೊಳಗೆ ಪತ್ತೆಹಚ್ಚದೇ ಇದ್ದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರ್ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ರಾಜ್ ಬಿರ್ತಿ, ಮಂಜುನಾಥ್ ಗಿಳಿಯಾರು, ಶ್ಯಾಮಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ ಉಪಸ್ಥಿತರಿದ್ದರು.