ಉಡುಪಿ: ನಾಳೆ ಜಿಲ್ಲೆಯ 66,852 ಮಕ್ಕಳಿಗೆ ಪೋಲಿಯೋ ಲಸಿಕೆ

| Published : Mar 02 2024, 01:47 AM IST

ಸಾರಾಂಶ

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 568, ನಗರ ಪ್ರದೇಶದ 92, 6 ಮೊಬೈಲ್ ಟೀಂ, 31 ಟ್ರಾನ್ಸಿಟ್ ಬೂತ್‌ಗಳಲ್ಲಿ ಮತ್ತು ಎಲ್ಲ ಟೋಲ್ ಗೇಟ್‌ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯಲ್ಲಿ ಮಾರ್ಚ್ 3ರಿಂದ 6ರ ವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, 0-5 ವರ್ಷದೊಳಗಿನ ಗ್ರಾಮೀಣ ಪ್ರದೇಶದ 53661 ಹಾಗೂ ನಗರ ಪ್ರದೇಶದ 13191 ಸೇರಿದಂತೆ ಒಟ್ಟು 66852 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.ಭಾರತವು ಕಳೆದ 12 ವರ್ಷಗಳಿಂದ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಇದು ಮಹತ್ತರವಾದ ಸಾಧನೆಯಾಗಿದ್ದರೂ ಭಾರತದ ನೆರೆ ರಾಷ್ಟ್ರಗಳಲ್ಲಿ ಇನ್ನೂ ವೈಲ್ಡ್ ಪೋಲಿಯೋ ವೈರಸ್ ಇರುವುದು ಆತಂಕಕಾರಿಯಾಗಿದೆ. ಆದ್ದರಿಂದ ಅದು ನಮ್ಮ ದೇಶಕ್ಕೆ ಹರಡದಂತೆ ಪೋಲಿಯೋ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಆದ್ದರಿಂದ ತಜ್ಞರ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ) ದಿನವನ್ನು 2024 ರ ಮಾರ್ಚ್ 3ರಂದು ನಡೆಸಲು ಸರ್ಕಾರ ಆದೇಶಿಸಿರುತ್ತದೆ.ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 568, ನಗರ ಪ್ರದೇಶದ 92, 6 ಮೊಬೈಲ್ ಟೀಂ, 31 ಟ್ರಾನ್ಸಿಟ್ ಬೂತ್‌ಗಳಲ್ಲಿ ಮತ್ತು ಎಲ್ಲ ಟೋಲ್ ಗೇಟ್‌ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ವಿವಿಧ ಇಲಾಖೆ, ಸಂಘಸಂಸ್ಥೆಗಳ ಸಹಕಾರದಿಂದ ನಡೆಯುವ ಈ ಕಾರ್ಯಕ್ರಮಕ್ಕಾಗಿ 2788 ಲಸಿಕಾ ಸ್ವಯಂಸೇವಕರು, 144 ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.* ಸಾರ್ವಜನಿಕರಲ್ಲಿ ಮನವಿಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ 3 ರಂದು ಲಸಿಕಾ ಕೇಂದ್ರಗಳಿಗೆ ತೆರಳಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಮಾ. 4 ಮತ್ತು 5 ರಂದು ಹಾಗೂ ನಗರ ಪ್ರದೇಶದಲ್ಲಿ ಮಾ.4ರಿಂದ 6ರ ವರೆಗೆ ಸ್ವಯಂಸೇವಕರು ಮನೆ ಭೇಟಿ ಮಾಡಿ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಿಸಿದ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.