ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಎಲ್ಲಾ ರಂಗಗಳಲ್ಲಿಯೂ ವೈಫಲ್ಯ ಹೊಂದಿದ್ದು, ರಾಜಕೀಯ ಬೆಳವಣಿಗೆಗೆ ದೇಶದ್ರೋಹಿಗಳ ಪರ ನಿಂತಿದೆ ಎಂದು ಜಿಲ್ಲಾ ಬಿಜೆಪಿ ವಾಗ್ದಾಳಿ ನಡೆಸಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ರಾಜ್ಯ ಸರ್ಕಾರ ತೀವ್ರ ವಿಫಲತೆ ಅನುಭವಿಸಿದೆ. ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಮೊಳಗಿರುವುದು ಸರಕಾರ ಕಾನೂನು ಸುವ್ಯವಸ್ಥೆ ಮೇಲಿಟ್ಟಿರುವ ನಿಗಾವನ್ನು ಪ್ರದರ್ಶಿಸುತ್ತಿದೆ. ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಈ ರೀತಿ ಘೋಷಣೆ ಕೂಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಯತ್ನ ಮಾಡುತ್ತಿದ್ದು, ಘೋಷಣೆ ಕೂಗಿದವನ ವಿರುದ್ಧ ಹಾಗೂ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನು ದೇಶದ್ರೋಹ ಮಾಡಿದ ಪ್ರಕರಣದಡಿ ಬಂಧಿಸಬೇಕು. ಜೊತೆಗೆ ನಾಸೀರ್ ಹುಸೇನ್ ಸ್ಥಾನ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸಕ್ಕೆ ಮುಂದಾಗಿದೆ. ಗೃಹ ಸಚಿವರು ಪ್ರಕರಣ ಗಂಭೀರವಾಗಿ ಪರಿಗಣಿಸಬೇಕಿತ್ತು. ದೇಶಭಕ್ತ ಮತದಾರರು ಇವೆಲ್ಲ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.ಸಂಸದ ಡಿ.ಕೆ. ಸುರೇಶ್ ‘ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಮಾಡಬೇಕೆಂಬ’ ಹೇಳಿಕೆಯನ್ನು ಕಾಂಗ್ರೆಸ್ ವಿರೋಧಿಸಿಲ್ಲ. ಹಿಂದಿನಿಂದಲೂ ಕಾಂಗ್ರೆಸ್ ದೇಶ ಒಡೆಯುವ ಸಂಸ್ಕೃತಿ ಹೊಂದಿದ್ದು, ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಇದರಿಂದ ಕಾಂಗ್ರೆಸ್‌ನಿಂದ ‘ಹಿಡನ್ ಅಜೆಂಡಾ’ ಬಹಿರಂಗವಾಗುತ್ತಿದೆ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿವದರಿಗಾಗಿ ಮೀಸಲಿಟ್ಟಿದ್ದ ರೂ. ೧೧ ಸಾವಿರ ಕೋಟಿ ರು.ನಷ್ಟು ಹಣವನ್ನು ಬೇರೆ ಉದ್ದೇಶಗಳಿಗೆ ಸರ್ಕಾರ ಬಳಸಿಕೊಳ್ಳುತ್ತಿದೆ. ಅಹಿಂದ ಪರ ಎನ್ನುವು ತೋರ್ಪಡಿಕೆಗೆ ಮಾತ್ರ. ಸಿದ್ದರಾಮಯ್ಯ ಅವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ ಎಂದು ಕುಟುಕಿದರು.ಜಿಲ್ಲಾ ವಕ್ತಾರ ತಳೂರು ಕಿಶೋರ್ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದಿಸಿದೆ. ಅಭಿವೃದ್ಧಿ ಬಗ್ಗೆ ಬಹಿರಂಗವಾಗಿ ತಿಳಿಸಲಿ. ಸಹಕಾರ ಕ್ಷೇತ್ರವನ್ನು ಸರ್ಕಾರ ನಿರ್ಣಾಮ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಈ ಹಿಂದೆ ಸಂಸತ್ತು ಭವನದಲ್ಲಿ ನಡೆದ ಘಟನೆಯಲ್ಲಿ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದರು ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಇಂದು ಮೌನಕ್ಕೆ ಜಾರಿದೆ. ಅವರೆ ಪಕ್ಷದವರು ದೇಶ ವಿರೋಧಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಉಪಾಧ್ಯಕ್ಷ ಮನುಮಂಜುನಾಥ್, ವಕ್ತಾರ ಬಿ.ಕೆ. ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು. ಹುದಿಕೇರಿ ಪ್ಯಾಕ್‌ಗೆ ತಾಕತ್ತಿದ್ದರೆ ಚುನಾವಣೆ ನಡೆಸಿರಾಜಕೀಯ ಸ್ವಾರ್ಥ ಸಾಧನೆಗೆ ಹುದಿಕೇರಿ ಪ್ಯಾಕ್‌ಗೆ ಚುನಾವಣೆ ನಡೆಸದೆ ಶಾಸಕರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ರವಿಕಾಳಪ್ಪ ಆರೋಪ ಮಾಡಿದರು. ಹಣ ದುರುಪಯೋಗವಾಗಿಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಚುನಾವಣೆ ತಡೆಹಿಡಿಯಲಾಗಿದೆ. ಅಲ್ಲದೆ ಸಿಇಒ ಅವರನ್ನು ಅಮಾನತ್ತುಗೊಳಿಸಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ತಾಕತ್ತಿದ್ದಾರೆ ಚುನಾವಣೆ ನಡೆಸಿ ಗೆಲ್ಲಲಿ ಎಂದು ಕಾಂಗ್ರೆಸ್‌ಗೆ ಸವಾಲೆಸಿದರು.
ಶಾಶ್ವತ ಕ್ರಮಕ್ಕೆ ಒತ್ತಾಯವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ವಿಚಾರವಾಗಿ ರಾಜ್ಯ ಸರ್ಕಾರ ಶಾಶ್ವತ ಕ್ರಮವಹಿಸಬೇಕೆಂದು ನಾಪಂಡ ರವಿಕಾಳಪ್ಪ ಒತ್ತಾಯಿಸಿದರು. ಪಾರಂಪರಿಕವಾಗಿ ಬಂದ ಉತ್ಪನ್ನ ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾಗುತ್ತಿದ್ದು, ರಾಜ್ಯ ಸರ್ಕಾರ ದಿಢೀರ್ ಆಗಿ ಹಿಂದಿರುಗಿಸುವಂತೆ ಸೂಚಿಸಿರುವುದು ಸಮಂಜಸವಲ್ಲ. ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿರುವ ಎ.ಎಸ್. ಪೊನ್ನಣ್ಣ ಅವರು ಈ ಬಗ್ಗೆ ಗಮನ ಸೆಳೆದು ಜಿಲ್ಲೆಗೆ ವಿನಾಯಿತಿ ಕೊಡಿಸುವ ಕೆಲಸ ಮಾಡಬಹುದಿತ್ತು. ಆದರೆ, ಕೋರ್ಟ್ ಮೂಲಕ ತಡೆಯಾಜ್ಞೆ ತಂದು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಚುನಾವಣಾ ಲೆಕ್ಕಾಚಾರ. ತಡೆಯಾಜ್ಞೆ ತಾತ್ಕಾಲಿಕ ಪರಿಹಾರ ಎಂದರು.