ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮನೆ ಮೇಲಿನ ಹೆಂಚುಗಳನ್ನು ತೆಗೆದು ಬೀರುವಿನಲ್ಲಿದ್ದ 9.35 ಲಕ್ಷ ರು. ಮೌಲ್ಯದ 170 ಗ್ರಾಂ. ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕೃತ್ಯ ನಡೆದ 24ಗಂಟೆಯೊಳಗೆ ಬಂಧಿಸಿರುವ ಬೆಳ್ಳೂರು ಠಾಣೆ ಪೊಲೀಸರು ಕಳವಾಗಿದ್ದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಬಿಹಾರ್ ರಾಜ್ಯದ ಮಧುಬನಿ ಜಿಲ್ಲೆಯ ನಗ್ದಬಲೈನ್ ತಾಲೂಕಿನ ಕುಸುಮುಲ್ ಗ್ರಾಮದ ಲತ್ತರ್ ಮುಖಿಯಾ ಪುತ್ರ ಶಂಕರ್‌ಮುಖಿಯಾ(23) ಬಂಧಿತ ಆರೋಪಿ.
ತಾಲೂಕಿನ ಬೆಳ್ಳೂರು ಹೋಬಳಿಯ ವರಾಹಸಂದ್ರ ಗ್ರಾಮದ ಪ್ರಮೀಳ ಮತ್ತು ಸತೀಶ್ ದಂಪತಿ ಮನೆಯಲ್ಲಿ ಬಿಹಾರ ಮೂಲದ ಶಂಕರ್‌ಮುಖಿಯಾ ಕೂಲಿ ಕೆಲಸ ಮಾಡಿಕೊಂಡಿದ್ದನು. ಸತೀಶ್‌ಗೆ ಆರೋಗ್ಯ ಸಮಸ್ಯೆ ಕಂಡುಬಂದ ಹಿನ್ನೆಲೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪ್ರಮೀಳ ತನ್ನ ಪತಿ ಸತೀಶ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಅಲ್ಲಿಯೇ ಇದ್ದರು.ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮೇಲಿನ ಹೆಂಚುಗಳನ್ನು ತೆಗೆದು ಬೀರುವಿನಲ್ಲಿದ್ದ 9.35 ಲಕ್ಷ ರು. ಮೌಲ್ಯದ 170 ಗ್ರಾಂ. ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ಸತೀಶ್ ಪತ್ನಿ ಪ್ರಮೀಳ ಫೆ.12ರಂದು ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಕಳವಾಗಿರುವ ಚಿನ್ನದ ಒಡವೆ ಮತ್ತು ಆರೋಪಿಯ ಪತ್ತೆಗೆ ಡಿವೈಎಸ್‌ಪಿ ಎ.ಆರ್.ಸುಮಿತ್ ಮತ್ತು ಆರಕ್ಷಕ ವೃತ್ತ ನಿರೀಕ್ಷಕ ಬಿ.ಆರ್.ಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅಪರಾಧ ಪತ್ತೆ ತಂಡದ ಪೊಲೀಸರು ಆರೋಪಿ ಶಂಕರ್ ಮುಖಿಯಾನನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಫೆ.13ರಂದು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿ ಕಳ್ಳತನ ಮಾಡಿದ್ದ ಚಿನ್ನದ ಒಡವೆಗಳನ್ನು ದಸ್ತಗಿರಿ ಮಾಡಿದ್ದಾರೆ.
ಕೃತ್ಯ ನಡೆದ 24 ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆದು ಕಳವಾಗಿದ್ದ 170 ಗ್ರಾಂ. ಚಿನ್ನದ ಒಡವೆಗಳನ್ನು ದಸ್ತಗಿರಿ ಮಾಡಿರುವ ಅಪರಾಧ ಪತ್ತೆ ತಂಡದ ಪೊಲೀಸರನ್ನು ಜಿಲ್ಲಾ ಎಸ್ಪಿ ಎನ್.ಯತೀಶ್ ಮತ್ತು ಎಎಸ್ಪಿ ಎಸ್.ಈ.ಗಂಗಾಧರಸ್ವಾಮಿ ಅಭಿನಂದಿಸಿದ್ದಾರೆ.ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಬೆಳ್ಳೂರು ಠಾಣೆಯ ಪಿಎಸ್‌ಐ ಬಸವರಾಜ ಚಿಂಚೋಳಿ, ಅಪರಾಧ ವಿಭಾಗದ ಪಿಎಸ್‌ಐ ಪುನೀತ್, ಸಿಬ್ಬಂದಿ ಕೆ.ವಿ.ಪ್ರಶಾಂತ್ ಕುಮಾರ್, ಬಿ.ಕೆ.ಕಿರಣ್ ಕುಮಾರ್, ಶಂಕರನಾಯ್ಕ, ರವಿಕಿರಣ್ ಮತ್ತು ಲೋಕೇಶ್ ಕರ್ತವ್ಯ ನಿರ್ವಹಿಸಿದ್ದರು.