ಸಾರಾಂಶ
ಬ್ಯಾಡಗಿ: ಗ್ರಾಮೀಣ ಪ್ರದೇಶದ ಜನರಿಗೆ ಶಾಲೆಗಳು ಅಕ್ಷಯ ಪಾತ್ರೆಗಳಿದ್ದಂತೆ, ನಮ್ಮೂರಿನ ಮಕ್ಕಳು ವಿದ್ಯಾವಂತರನ್ನಾಗಿಸುವುದರ ಜತೆಗೆ ಸರ್ಕಾರಿ ಶಾಲೆಗಳ ಆಸ್ತಿಗಳ ರಕ್ಷಣೆಯಲ್ಲಿ ಪ್ರತಿಯೊಬ್ಬರ ಸಾರ್ವಜನಿಕ ಸಹಭಾಗಿತ್ವ ಹಾಗೂ ಹೊಣೆಗಾರಿಕೆ ತೋರಬೇಕಾಗಿದೆ ಎಂದು ಸ್ಥಳೀಯ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ಮಿಸಿದ ಊಟದ ಕೊಠಡಿ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಶಿಕ್ಷಣ ಪ್ರಮುಖ ಆದ್ಯತೆಯಾಗಬೇಕಿದೆ, ಹೀಗಾಗಿ ಸರ್ಕಾರವೂ ಸಹ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ, ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗುವ ಪಾಲಕರು ತಮ್ಮೂರಿನಲ್ಲಿರುವ ಸರ್ಕಾರಿ ಶಾಲೆಗಳನ್ನು ತಿರಸ್ಕರಿಸುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದ ಅವರು, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸರ್ಕಾರಿ ಶಾಲೆಗಳು ಹೆಚ್ಚಿನ ಶ್ರಮ ವಹಿಸುತ್ತಿವೆ ಅದರ ಪ್ರಯೋಜನ ತಾವೆಲ್ಲರೂ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸರ್ಕಾರದ ಜವಾಬ್ದಾರಿ ಇಳಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು:ಸ್ವಯಂ ಸೇವಾ-ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಡಿ ಇಡುತ್ತಿರುವುದು ಇದೊಂದು ಉತ್ತಮ ಬೆಳವಣಿಗೆಯಾಗಿದೆ, ಸಂಸ್ಥೆಗಳ ಯೋಜನಾ ಬದ್ಧತೆ ಮತ್ತು ಕಾರ್ಯವೈಖರಿ, ಸರ್ಕಾರದ ಮೇಲಿನ ಜವಾಬ್ದಾರಿ ಭಾಗಷಃ ಇಳಿಸಿದೆ ಎಂದರೂ ತಪ್ಪಾಗುವುದಿಲ್ಲ ಇದರಲ್ಲಿ ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಹೊಳಬಸವೇಶ್ವರ ಸಮುದಾಯ ಭವನಕ್ಕೆ ₹25 ಲಕ್ಷ:ಪ್ರಸಕ್ತ ಬಜೆಟ್‌ನಲ್ಲಿ₹52 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಮಿಸಲಿಟ್ಟಿದ್ದೇವೆ. ಹೀಗಾಗಿ ಸ್ವಲಮಟ್ಟಿಗೆ ಅನದಾನದ ಕೊರತೆಯಾಗಿದೆ, ಅಷ್ಟಕ್ಕೂ ಗ್ರಾಮದ ಹೊಳಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಅವಶ್ಯವಿದ್ದು ಬರುವ ದಿನಗಳಲ್ಲಿ ₹ 25 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಇದಕ್ಕೂ ಮುನ್ನ ಮುಖ್ಯಶಿಕ್ಷಕ ಐ.ಬಿ. ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಚಿನ್ನಪ್ಪ ಹೊಸಮನಿ, ಬಿಇಓ ಎಸ್.ಜಿ. ಕೋಟಿ, ಅಕ್ಷರ ದಾಸೋಹಧಾಕಾರಿ, ಎನ್.ತಿಮ್ಮಾರೆಡ್ಡಿ, ಸಿಆರ್‌ಪಿ ಕೆ.ಎನ್. ಗೆಜ್ಜಿ, ಬಿಆರ್‌ಸಿ ಮಾಲತೇಶ ಹುಳ್ಯಾಳ, ಪಿಡಿಓ ಶಿವಾನಂದ ಕುಬಟುರ, ಪ್ರೌಢಶಾಲೆ ಮುಖ್ಯಶಿಕ್ಷಕ ಜೆ.ಎಚ್. ಛತ್ರದ, ಎಸ್‌ಡಿಎಂಸಿ ಅಧ್ಯಕ್ಷ ಶಂಭು ಯಲಿಗಾರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನಬಸಪ್ಪ ಹುಲ್ಲತ್ತಿ, ನ್ಯಾಯವಾದಿ ಡಿ.ಎಚ್. ಬುಡ್ಡನಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಶಿಕ್ಷಕ ಶಂಕರ ಕುಸಗೂರು ಸ್ವಾಗತಿಸಿದರು, ವಿಜಯ ಶಿಡಗನಾಳ ನಿರೂಪಿಸಿ ವಂದಿಸಿದರು.