ಸಾರಾಂಶ
ಆಪರೇಶನ್ ಸಿಂದೂರ್ ಯಶಸ್ಸಿನ ಹಿನ್ನೆಲೆ
ಕನ್ನಡಪ್ರಭ ವಾರ್ತೆ ಉಡುಪಿಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂದೂರ್‌ನ ಯಶಸ್ಸಿಗೆ ಕಾರಣರಾದ ಯೋಧರಿಗೆ ಅಭಿನಂದನೆ ಸಲ್ಲಿಸುವ ಮತ್ತು ಮುಂದೆ ಸೇನೆ ನಡೆಸಲಿರುವ ಕಾರ್ಯಾಚರಣೆಯ ಯಶಸ್ಸಿಗೆ ಪ್ರಾರ್ಥಿಸಿ, ಮುಜರಾಯಿ ಇಲಾಖೆಯ ಸೂಚನೆಯಂತೆ ಉಡುಪಿ ಜಿಲ್ಲೆಯ ಮುಜರಾಯಿ ದೇವಾಲಯಗಳಲ್ಲಿ ಗುರುವಾರ ಮಧ್ಯಾಹ್ನ ವಿಶೇಷ ಪೂಜೆ ಸಲ್ಲಿಸಲಾಯಿತು. ಜೊತೆಗೆ ಕೆಲವು ಖಾಸಗಿ ದೇವಾಲಗಳಲ್ಲಿಯೂ ಪ್ರಾರ್ಥನೆ, ದೀಪಾರಾಧನೆಗಳನ್ನು ನೆರವೇರಿಸಲಾಯಿತು.ಮುಖ್ಯವಾಗಿ ಕಡಿಯಾಳಿ ದೇವಾಲಯದಲ್ಲಿ ವ್ಯವಸ್ಥಾಪನ ಸಮಿತಿಯು ಶ್ರೀ ಮಹಿಷಾಸುರ ಮರ್ಧಿನಿ ದೇವಿಗೆ ದೀಪಾರಾಧನೆ ನಡೆಸಿ ದೇಶದ ಸೇನೆಯ ವಿಜಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಾಲಯದಲ್ಲಿಯೂ ವ್ಯವಸ್ಥಾಪನಾ ಸಮಿತಿಯಿಂದ ವಿಶೇಷ ಅಲಂಕಾರ ಪೂಜೆಗಳನ್ನು ನೆರವೇರಿಸಲಾಯಿತು.ಬನ್ನಂಜೆಯ ಮಹಾಲಿಂಗೇಶ್ವರ ದೇವಾಲಯದಲ್ಲಿ ಉಡುಪಿ ನಗರ ಬಿಜೆಪಿ ವತಿಯಿಂದ ಸೇನೆಯ ವಿಜಯ ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಕ್ಕಾಗಿ ಅಭಿಷೇಕ, ಪೂಜೆ, ಪ್ರಾರ್ಥನೆ ಸಲ್ಲಿಸಯಿತು.ಆಪರೇಶನ್ ಸಿಂದೂರದ ವಿಜಯದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕೊಡವೂರು ಶಿರ್ಡಿ ಸಾಯಿಬಾಬಾ ಮಂದಿರಲ್ಲಿ ಪೂಜೆ ಮತ್ತು ಸಿಂದೂರ ವಿತರಣೆ ನಡೆಸಲಾಯಿತು.ಚಕ್ರಪಾಣಿ ಸಿಂದೂರ ಕೃಷ್ಣ:ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ವಿಶೇಷ ಮಂಗಳರಾತಿ ನಡೆಸಿ, ಭಾರತೀಯ ಸೇನೆಯ ಶ್ರೇಯಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.ಅಲ್ಲದೇ ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ಚಕ್ರಧಾರಿ ಯೋಧ ಕೃಷ್ಣನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಇದರಲ್ಲಿ ವಿಶೇಷ ಎಂದರೆ ಕೃಷ್ಣನ ಒಂದು ಕೈಯಲ್ಲಿ ಚಕ್ರವಿದ್ದರೆ, ಇನ್ನೊಂದು ಕೈಯಲ್ಲಿ ಬೆಳ್ಳಿಯ ಸಿಂದೂರ ತಟ್ಟೆ ಇತ್ತು. ಆಪರೇಶನ್ ಸಿಂದೂರದ ವಿಜಯದ ಮತ್ತು ಸೇನೆಯ ಮುಂದಿನ ಕಾರ್ಯಾಚರಣೆಗೆ ಕೃಷ್ಣನ ಅಭಯದ ಪ್ರತೀಕವಾಗಿ ಶ್ರೀಗಳು ಈ ಅಲಂಕಾರ ಮಾಡಿದ್ದರು.