ಸಾರಾಂಶ
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುವ ಅ.ಭಾ. ಖೋಖೋ ಪಂದ್ಯಾಕೂಟದಲ್ಲಿ ದೇಶದ 4 ವಲಯಗಳಿಂದ ತಲಾ 4ರಂತೆ ಒಟ್ಟು 16 ಅತ್ಯುತ್ತಮ ತಂಡಗಳು ಭಾಗವಹಿಸುತ್ತಿವೆ. ಪಂದ್ಯಾಟಗಳು ಲೀಗ್ / ನಾಕೌಟ್ ಆಧಾರದಲ್ಲಿ ನಡೆಯಲಿದ್ದು, 600 ಆಟಗಾರರು ಮತ್ತು 300 ಮಂದಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು 40 ಲಕ್ಷ ರು.ಗಳ ವೆಚ್ಚ ಅಂದಾಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ)ನಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟವನ್ನು 9 ರಿಂದ 12ರ ವರೆಗೆ ಆಯೋಜಿಸಿದೆ. ಅದಕ್ಕಾಗಿ ದೇಶದಲ್ಲಿಯೇ ಪ್ರಥಮ ಬಾರಿಗೆ ಜರ್ಮನ್ ಹ್ಯಾಂಗರ್ ತಂತ್ರಜ್ಞಾನದ ಶ್ರೀ ವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣದಲ್ಲಿ ಸಿಂಥೆಟಿಕ್ ಮ್ಯಾಟ್ ಕ್ರೀಡಾಂಗಣ ನಿರ್ಮಿಸಲಾಗಿದೆ.ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ. ಎಸ್. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಈ ಪಂದ್ಯಾಕೂಟದಲ್ಲಿ ದೇಶದ 4 ವಲಯಗಳಿಂದ ತಲಾ 4ರಂತೆ ಒಟ್ಟು 16 ಅತ್ಯುತ್ತಮ ತಂಡಗಳು ಭಾಗವಹಿಸುತ್ತಿವೆ. ಪಂದ್ಯಾಟಗಳು ಲೀಗ್ / ನಾಕೌಟ್ ಆಧಾರದಲ್ಲಿ ನಡೆಯಲಿದ್ದು, 600 ಆಟಗಾರರು ಮತ್ತು 300 ಮಂದಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು 40 ಲಕ್ಷ ರು.ಗಳ ವೆಚ್ಚ ಅಂದಾಜಿಸಲಾಗಿದೆ ಎಂದರು.ಪಂದ್ಯಗಳು ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 10 ಗಂಟೆಗೆಯವರೆಗೆ ನಿರಂತರವಾಗಿ ನಡೆಯಲಿವೆ. ಆದ್ದರಿಂದ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆಟಗಾರರಿಗೆ ಉಳಿದುಕೊಳ್ಳುವುದಕ್ಕೆ ವಸತಿ, ಪ್ರಯಾಣಕ್ಕೆ ವಾಹನ, ಊಟೋಪಚಾರ ವ್ಯವಸ್ಥೆಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ಪಂದ್ಯಾಕೂಟವನ್ನು ಏ.9ರಂದು ಬೆಳಗ್ಗೆ 10.30ಕ್ಕೆ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಕರ್ಣಾಟಕ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣನ್ ಎಚ್. ಮತ್ತು ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಭಾಗವಹಿಸಿದ್ದಾರೆ.5ನೇ ರಾಷ್ಟ್ರೀಯ ಪಂದ್ಯಾಕೂಟ:
ಪೂರ್ಣ ಪ್ರಜ್ಞ ಕಾಲೇಜು ಕ್ರೀಡೆಗಳಿಗೆ ಸದಾ ಪ್ರೋತ್ಸಾಹ ನೀಡುತಿದ್ದು, ಈ ಖೋಖೋ ಪಂದ್ಯಾಟವು ಇಲ್ಲಿ ನಡೆಯುತ್ತಿರುವ 6ನೇ ರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಇಲ್ಲಿ 2018ರಲ್ಲಿ ಅ.ಭಾ. ಅಂತರ ವಿವಿ ನೆಟ್‌ಬಾಲ್, 2019 ಮತ್ತು 2023ರಲ್ಲಿ ಅ.ಭಾ. ಅಂತರ ವಿವಿ ಕಬಡ್ಡಿ ಮತ್ತು 2024ರಲ್ಲಿ ಅ.ಭಾ. ಅಂತರ ವಿವಿ ಪುರುಷರ ಖೋಖೋ ಪಂದ್ಯಾಟಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಪಂದ್ಯಾಕೂಟದ ಸಂಘಟನಾ ಕಾರ್ಯದರ್ಶಿ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್, ಪಂದ್ಯಾಕೂಟದ ಸಂಯೋಜಕ, ಪೂರ್ಣಪ್ರಜ್ಞ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ಇದ್ದರು.
....................ದಕ್ಷಿಣ ವಲಯದಿಂದ ಕರ್ನಾಟಕದ ಮಂಗಳೂರು ವಿ.ವಿ., ದಾವಣಗೆರೆ ವಿ.ವಿ.. ತಮಿಳುನಾಡಿನ ಕೊಯಮುತ್ತೂರು ಭಾರತಿಯಾರ್ ವಿ.ವಿ., ಕೇರಳದ ತಿರುವನಂತಪುರ ವಿ.ವಿ., ಪಶ್ಚಿಮ ವಲಯದಿಂದ ಮಹಾರಾಷ್ಟ್ರದ ನಾಂದೇಡ್‌ನ ಎಸ್.ಆರ್.ಟಿ.ಎಮ್. ವಿ.ವಿ., ಮುಂಬೈ ವಿ.ವಿ., ಪುಣೆಯ ಸಾವಿತ್ರಿ ಬಾಯಿ ಪುಲೆ ವಿ.ವಿ. ಪುಣೆ, ಉತ್ತರ ವಲಯದಿಂದ ಉತ್ತರಪ್ರದೇಶ ರಾಜ್ಯದ ಕಾನ್ಪುರದ ಸಿ.ಎಸ್.ಜೆ.ಎಂ. ವಿ.ವಿ.,. ಕಾನ್ಸುರ, ಪಂಜಾಬಿನ ಜಲಂದರ್‌ನ ಎಲ್.ಪಿ.ವಿ.ವಿ., ಅಮೃತ್‌ಸರ್‌ನ ಜಿ.ಎನ್.ಡಿ. ವಿ.ವಿ., ದೆಹಲಿ ವಿ.ವಿ., ಪೂರ್ವ ವಲಯದಿಂದ ಒಡಿಸ್ಸಾದ ಭುವನೇಶ್ವರ ಕೆ.ಐ.ಐ.ಟಿ., ಛತ್ತೀಸ್‌ಗಡ್ ಹೇಮಚಂದಯಾದವ ವಿ.ವಿ., ಗಂಗಾಧರ ಮೆಹರ್ ವಿ.ವಿ., ಪಂಡಿತ್ ರವಿಶಂಕರ ಶುಕ್ಲ ವಿ.ವಿ.ಗಳು ಭಾಗವಹಿಸಲಿವೆ.