ಇಲ್ಲಿನ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಮಂತ್ರಾಲಯ ರಾಘವೇಂದ್ರ ಮಠದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355 ನೇ ಆರಾಧನೆಯು ವೈಭವದಿಂದ ನಡೆಯಿತು.

ಉಡುಪಿ : ಇಲ್ಲಿನ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಮಂತ್ರಾಲಯ ರಾಘವೇಂದ್ರ ಮಠದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355 ನೇ ಆರಾಧನೆಯು ವೈಭವದಿಂದ ನಡೆಯಿತು. ಈ ಪ್ರಯುಕ್ತ ಪರ್ಯಾಯ ಶಿರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು ರಾಘವೇಂದ್ರ ಮಠದಲ್ಲಿ ವೃಂದಾವನಕ್ಕೆ ಪೂಜೆ ಸಲ್ಲಿಸಿ ಬಳಿಕ ರಥೋತ್ಸವದಲ್ಲಿ ಪಾಲ್ಗೊಂಡರು ಹಾಗೂ ಸಂಪ್ರದಾಯದಂತೆ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಉತ್ಸವ ಮೂರ್ತಿಗೆ ಪೂಜೆ ಹಾಗೂ ಅನ್ನಸಂತರ್ಪಣೆಗೆ ಪಲ್ಲಪೂಜೆ ನಡೆಸಿದರು. ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ರಾಯರು ಭಕ್ತರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು ಸಂಸ್ಕೃತ ಕಾಲೇಜಿನ ವಾರ್ಷಿಕೋತ್ಸವ: ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯ ದಿನದಂದು ಪ್ರಾರಂಭವಾದ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಮಹಾಪಾಠ ಶಾಲೆಯ 122ನೇ ವಾರ್ಷಿಕೋತ್ಸವವು ಹಾಗೂ ಸಂಸ್ಕೃತೋತ್ಸವವೂ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು. ಕೃಷ್ಣಾಪುರ ಮಠದ ಯತಿಗಳಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಅಭ್ಯಾಗತರಾಗಿ ವಿದ್ವಾಂಸ ಡಾ. ವಿನಯಚಂದ್ರ ಬನವತಿ ಹಾಗೂ ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯರು, ಎಸ್.ಎಮ್. ಎಸ್. ಪಿ. ಸಭೆಯ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸರು, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯರು ಹಾಗೂ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ ಎಸ್. ಅಮೃತೇಶ ಆಚಾರ್ಯರು ಉಪಸ್ಥಿತರಿದ್ದರು