ಉಡುಪಿ ಸೀರೆ ನೇಕಾರರಿಬ್ಬರಿಗೆ ಕದಿಕೆ ಟ್ರಸ್ಟ್‌ನಿಂದ ನೇಕಾರ ರತ್ನ ಪ್ರಶಸ್ತಿ

| Published : Aug 07 2024, 01:05 AM IST

ಉಡುಪಿ ಸೀರೆ ನೇಕಾರರಿಬ್ಬರಿಗೆ ಕದಿಕೆ ಟ್ರಸ್ಟ್‌ನಿಂದ ನೇಕಾರ ರತ್ನ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ಜಿಲ್ಲಾಧಿಕಾರಿ ಸಮ್ಮುಖ ಪ್ರಶಸ್ತಿ ನೀಡಲಾಗುವುದು ಎಂದು ಕದಿಕೆ ಟ್ರಸ್ಟ್ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಶೆಟ್ಟಿಗಾರ್ (86 ) ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ನಿರ್ದೇಶಕ ಸೋಮಪ್ಪ ಜತ್ತನ್ನ (89) ಇವರಿಗೆ ಜೀವಮಾನದ ಸಾಧನೆಗಾಗಿ ಕಾರ್ಕಳದ ಕದಿಕೆ ಟ್ರಸ್ಟ್ ವತಿಯಿಂದ ಕೈಮಗ್ಗ ನೇಕಾರರಿಗೆ ಕೊಡ ಮಾಡುವ‘ನೇಕಾರ ರತ್ನ’ ಪ್ರಶಸ್ತಿ ಪ್ರಕಟಿಸಲಾಗಿದೆ.

ಇವರಿಬ್ಬರು ಅವಿಭಜಿತ ದ. ಕ. ಜಿಲ್ಲೆಯ ಅತ್ಯಂತ ಹಿರಿಯ ಸಕ್ರಿಯ ನೇಕಾರರು. ಸಂಜೀವ ಶೆಟ್ಟಿಗಾರ್ ಅವರು ಸುಮಾರು 74 ವರ್ಷಗಳಿಂದ ನಿರಂತರವಾಗಿ ನೇಯ್ಗೆ ಮಾಡುತ್ತಿರುವುದು ಒಂದು ದಾಖಲೆ ಆಗಿದೆ. ಸೋಮಪ್ಪ ಜತ್ತನ್ನ ಅವರು ಕಳೆದ 66 ವರ್ಷಗಳಿಂದ ನೇಕಾರಿಕೆ ಕಾಯಕದಲ್ಲಿ ನಿರತರಾಗಿದ್ದಾರೆ.

ಸಂಜೀವ ಶೆಟ್ಟಿಗಾರ್ ಅವರು, ಪ್ರಸ್ತುತ ಅಳಿದುಹೋಗಿರುವ ಮುತ್ತುಗಳ ಬಾರ್ಡರ್ ನೇಯ್ಗೆಯನ್ನು 2019ರ ವರೆಗೆ ನೇಯುತ್ತಿದ್ದರು . ಈಗಲೂ ತಮ್ಮದೇ ವಿನ್ಯಾಸದ ಸೆರಗಿನಲ್ಲಿ ಬುಟ್ಟಾ ಇರುವ 60 ಕೌಂಟ್ ಸೀರೆಗಳನ್ನು ನೇಯುವುದರ ಜೊತೆಗೆ ಅನೇಕ ನೇಕಾರರಿಗೆ ಹಾಸು ಮತ್ತು ವಿನ್ಯಾಸ ಮಾಡುವ ಕೆಲಸ ಮಾಡುತ್ತಾ ಸಕ್ರಿಯರಾಗಿದ್ದಾರೆ. ನೇಕಾರರ ಸಂಘದ ಕಾರ್ಯ ಚಟುವಟಿಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಣೆ ಮಾಡುತ್ತಿದ್ದಾರೆ.

ಸೋಮಪ್ಪ ಜತ್ತನ್ನ ಅವರು 60 ಕೌಂಟ್‌ನ ಸಣ್ಣ ಚೌಕುಳಿ ವಿನ್ಯಾಸದ ಅಪೂರ್ವ ಕಟ್ ಬಾರ್ಡರ್ ಉಡುಪಿ ಸೀರೆಗಳನ್ನು ನೇಯುತ್ತಿದ್ದಾರೆ. ಈ ಹಿರಿಯ ಕಾಯಕ ಯೋಗಿಗಳು ಪರಿಸರ ಸ್ನೇಹಿ ಉಡುಪಿ ಸೀರೆ ನೇಕಾರಿಕೆಗೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಳಿವಿನಂಚಿಗೆ ತಲುಪಿದ್ದ ಉಡುಪಿ ಸೀರೆ ನೇಕಾರಿಕೆ ಈಗ ಕದಿಕೆ ಟ್ರಸ್ಟ್ ನ ಪ್ರಯತ್ನದಿಂದ ಪುನಶ್ಚೇತನಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ಜಿಲ್ಲಾಧಿಕಾರಿ ಸಮ್ಮುಖ ಪ್ರಶಸ್ತಿ ನೀಡಲಾಗುವುದು ಎಂದು ಕದಿಕೆ ಟ್ರಸ್ಟ್ ತಿಳಿಸಿದೆ.