ಸಾರಾಂಶ
ಇತ್ತೀಚೆಗೆ ಸಿಎನ್‌ಜಿ ಆಧರಿತ ವಾಹನಗಳು ಹೆಚ್ಚುತ್ತಿದ್ದರೂ, ಅಷ್ಟೇ ಪ್ರಮಾಣದಲ್ಲಿ ಸಿಎನ್‌ಜಿ ಇಂಧನ ಸ್ಟೇಷನ್‌ಗಳು ಸ್ತಾಪನೆಯಾಗುತ್ತಿಲ್ಲ. ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಸಿಎನ್ ಜಿ ಇಂಧನ ಕೂಡ ಪೂರೈಕೆಯಾಗುತ್ತಿಲ್ಲ. ಇದರಿಂದ ವಾಹನ ಚಾಲಕರಿಗೆ ಸಂಕಷ್ಟ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ವಾಹನಗಳಿಗೆ ತುಂಬಿಸುವ ಸಿಎನ್ ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಇಂಧನದ ತೀವ್ರ ಕೊರತೆಯುಂಟಾಗಿದ್ದು, ಇದರಿಂದ ಈ ಇಂಧನವನ್ನು ನಂಬಿಕೊಂಡಿರುವ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇತ್ತೀಚೆಗೆ ಸಿಎನ್‌ಜಿ ಆಧರಿತ ವಾಹನಗಳು ಹೆಚ್ಚುತ್ತಿದ್ದರೂ, ಅಷ್ಟೇ ಪ್ರಮಾಣದಲ್ಲಿ ಸಿಎನ್‌ಜಿ ಇಂಧನ ಸ್ಟೇಷನ್‌ಗಳು ಸ್ತಾಪನೆಯಾಗುತ್ತಿಲ್ಲ. ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಸಿಎನ್ ಜಿ ಇಂಧನ ಕೂಡ ಪೂರೈಕೆಯಾಗುತ್ತಿಲ್ಲ.
ಮುಖ್ಯವಾಗಿ ಉಡುಪಿಯಲ್ಲಿ ಈ ಇಂಧನದಿಂದಲೇ ಓಡುವ ನೂರಾರು ಆಟೋರಿಕ್ಷಾಗಳಿವೆ. ಈ ಇಂಧನ ಚಾಲಕರು ಕಡಿಮೆ ಖರ್ಚಿನಲ್ಲಿ, ಕಡಿಮೆ ಪರಿಸರ ಮಾಲಿನ್ಯದೊಂದಿಗೆ ಬಾಡಿಗೆ ನಡೆಸುತ್ತಿದ್ದರು. ಆದರೆ ಕಳೆದೊಂದು ತಿಂಗಳಿಂದ ಸಿಎನ್‌ಜಿ ಇಂಧನದಲ್ಲಿ ಭಾರಿ ಕೊರತೆಯಾಗಿದೆ. ಈ ಇಂಧನ ತುಂಬಿಸಿಕೊಳ್ಳಲು ಈ ಇಂಧನ ಸ್ಟೇಷನ್‌ಗಳ ಮುಂದೆ ಆಟೋ ಚಾಲಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ.ಸಿಎನ್‌ಜಿಯಿಂದ ಓಡುವ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಸ್ಟೇಷನ್‌ಗಳಲ್ಲಿ ಇಂಧನ ಸಂಗ್ರಹ ಕೂಡ ತ್ವರಿತವಾಗಿ ಖಾಲಿಯಾಗುತ್ತಿದೆ. ಇದರಿಂದ ವಾಹನ ಚಾಲಕರು ಸ್ಟೇಷನ್ ಮುಂದೆ ಸರದಿಯಲ್ಲಿ ಕಾಯಬೇಕಾಗುತ್ತಿದೆ ಎನ್ನುತ್ತಾರೆ ಉಡುಪಿಯ ಸಿಎನ್‌ಜಿ ಸ್ಟೇಷನ್ ಸಿಬ್ಬಂದಿ.
ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮ ನಡೆದಿಲ್ಲ. ಇದೇ ರೀತಿ ಮುಂದುವರಿದರೆ ವಾರದಲ್ಲಿ ಎರಡು ದಿನವೂ ಬಾಡಿಗೆ ನಡೆಸಲಾಗದೇ ನಾವು ಸಂಕಷ್ಟಕ್ಕೆ ಸಿಲುಕಬೇಕಾಗಿದೆ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ, ಹೆಚ್ಚಿನ ಪ್ರಮಾಣದಲ್ಲಿ ಸಿಎನ್‌ಜಿ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂಬುದು ಆಟೋ ಚಾಲಕರ ಆಗ್ರಹವಾಗಿದೆ.