ಉಡುಪಿ: ರಾಮ ಸೇವೆ ಜೊತೆ ಸಾಮಾಜಿಕ ನೆರವು

| Published : Jan 23 2024, 01:50 AM IST

ಸಾರಾಂಶ

ರಾಮ ಪ್ರಾಣ ಪ್ರತಿಷ್ಠೆಯಂಗವಾಗಿ ಶ್ರೀರಾಮ ಸೇನೆಯ ವತಿಯಿಂದ ಮೂಡುತೊನ್ಸೆಯ ಕೆಮ್ಮಣ್ಣು ಎಂಬಲ್ಲಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ನಿರ್ಮಿಸಲಾದ ಮನೆ ಆಯೋಧ್ಯೆಯನ್ನು ಬಡಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾದ್ಯಂತ ರಾಮಭಕ್ತರು ಸೋಮವಾರ ತಮ್ಮೂರಿನಲ್ಲಿಯೇ ಅಯೋಧ್ಯೆ ರಾಮನ ಪ್ರತಿಷ್ಠೆಯನ್ನು ನಾನಾ ರೀತಿಯಲ್ಲಿ ಸಂಭ್ರಮಿಸಿದರು. ದೇವಾಲಯಗಳಲ್ಲಿ ಪೂಜೆ, ಹೋಮ ಹವನಾದಿಗಳು ನಡೆದರೆ, ಸಾರ್ವಜನಿಕವಾಗಿ ಸಮಾಜಸೇವೆಯ ಮೂಲಕ ತಮ್ಮ ರಾಮಭಕ್ತಿಯನ್ನು ತೋರಿಸಲಾಯಿತು.

ಹಿಂದೆ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ, ಕಾಂಗ್ರೆಸ್ ನಾಯಕ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಅವರು ಉಡುಪಿ ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ, ಅಯೋಧ್ಯೆಯ ರಾಮ ಪ್ರತಿಷ್ಠೆಯನ್ನು ಸಂಭ್ರಮಿಸಿದರು.

ಶ್ರೀ ರಾಮಲಲ್ಲಾನ ಪ್ರತಿಷ್ಠೆಯ ಪ್ರಯುಕ್ತ ಉಡುಪಿ ಜಿಲ್ಲಾ ಆಟೋ ಚಾಲಕರು ಮತ್ತು ಮಾಲಕರ ಸಂಘದಿಂದ ಪ್ರಯಾಣಿಕರಿಗೆ ಉಚಿತ ಆಟೋ ಪ್ರಯಾಣದ ಸೇವೆಯನ್ನು ಒದಗಿಸಲಾಯಿತು. ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ವರೆಗೆ ಸಂಘಟನೆಯ ಎಲ್ಲಾ ರಿಕ್ಷಾಗಳು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಎಲ್ಲರಿಗೂ ಯಾವುದೇ ಹಣವನ್ನು ಪಡೆಯದೆ ಉಚಿತವಾಗಿ ಸೇವೆಯನ್ನು ನೀಡಿದರು.

ಹೆಬ್ರಿಯಿಂದ ಉಡುಪಿಗೆ ಪ್ರಯಾಣಿಸುವ ಅನೇಕ ಬಸ್‌ಗಳು ಪ್ರಯಾಣಿಕರಿಗೆ ಉಚಿತ ಸೇವೆಯನ್ನು ನೀಡಲಾಯಿತು. ಉಡುಪಿಯ ಪೇಜಾವರ ಮಠದ ಆಡಳಿತ ವಿದ್ಯೋದಯ ಶಾಲೆಯಲ್ಲಿ ಮಕ್ಕಳಿಗೆ ರಾಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು.

ಬ್ರಹ್ಮಾವರ ಸಮೀಪದ ಗರೀಕೆಮಠದ ಅರ್ಕಗಣಪತಿ ದೇವಸ್ಥಾನದಲ್ಲಿ ಅಪರೂಪದ ಸೀತಾರಾಮ ಕಲ್ಯಾಣ ಮಹೋತ್ಸವವನ್ನು ಆಯೋಜಿಸಲಾಗಿತ್ತು.

ರಾಮ ಪ್ರಾಣ ಪ್ರತಿಷ್ಠೆಯಂಗವಾಗಿ ಶ್ರೀರಾಮ ಸೇನೆಯ ವತಿಯಿಂದ ಮೂಡುತೊನ್ಸೆಯ ಕೆಮ್ಮಣ್ಣು ಎಂಬಲ್ಲಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ನಿರ್ಮಿಸಲಾದ ಮನೆ ಆಯೋಧ್ಯೆಯನ್ನು ಬಡಕುಟುಂಬಕ್ಕೆ ಹಸ್ತಾಂತರಿಸಲಾಯಿತು.