ಸಾರಾಂಶ
ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ವಿಶ್ವಗೀತಾ ಪರ್ಯಾಯ ಎಂದೇ ಕರೆಯಲ್ಪಡುವ 4ನೇ ಪರ್ಯಾಯೋತ್ಸವ ಆರಂಭದಲ್ಲಿ ಸಂಕಲ್ಪಿಸಿದಂತೆ, ನ. 8ರಿಂದ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವದ ಆಮಂತ್ರಣ ಪತ್ರವನ್ನು ಬುಧವಾರ ಕನಕ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು.ಈ ಗೀತೋತ್ಸವದ ಅಂಗವಾಗಿ ಅಪೂರ್ವವಾದ ಲಕ್ಷಕಂಠ ಗೀತಾ ಪಾರಾಯಣ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಅಲ್ಲದೇ ಅನೇಕ ಸಂತರು ಈ ಉತ್ಸವದಲ್ಲಿ ಪಾಲ್ಗೊಂಡು ಗೀತಾ ಸಂದೇಶ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಮಾತನಾಡಿ, ಲಕ್ಷಾಂತರ ಮಂದಿ ಈಗಾಗಲೇ ಕೋಟಿ ಗೀತಾ ಲೇಖನಯಜ್ಞದಲ್ಲಿ ಭಾಗವಹಿಸಿದ್ದು ಅತೀವ ಸಂತಸ ತಂದಿದೆ. ಆ ಪ್ರಯುಕ್ತ ನಡೆಯಲಿರುವ ಈ ಬೃಹತ್ ಗೀತೋತ್ಸವದಲ್ಲಿ ಭಗವದ್ಗೀತೆಯ ತತ್ತ್ವವನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರಧಾನ ಮಂತ್ರಿ ಮೋದಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ರೀಕೃಷ್ಣನ ಸಂಕಲ್ಪವಾಗಿದೆ. ಈ ಕಾರ್ಯಕ್ರಮವನ್ನು ಉಡುಪಿಯ ಎಲ್ಲಾ ಜನರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಗೀತಾಚಾರ್ಯ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಶಿಸಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಸುರೇಶ ಶೆಟ್ಟಿ, ಬಿಜೆಪಿ ಜಿಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ವಾದಿರಾಜ, ಕಾರ್ಯಕ್ರಮ ಸಂಚಾಲಕ ಸುಪ್ರಸಾದ ಶೆಟ್ಟಿ ಮೊದಲಾದವರಿದ್ದರು.
ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮದ ವಿವರ ನೀಡಿದರು. ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.;Resize=(128,128))
;Resize=(128,128))