ಅನೇಕ ದಶಕಗಳಿಂದ ಉಡುಪಿಯ ಜನತೆಗೆ ಆರೋಗ್ಯ ಸೇವೆ ನೀಡುತ್ತಿರುವ ಡಾ. ಟಿ. ಎಂ. ಎ. ಪೈ ಆಸ್ಪತ್ರೆಯು ಉತ್ತಮ ಮತ್ತು ಉನ್ನತೀಕರಿಸಿದ ಮೂಲಸೌಕರ್ಯಗಳೊಂದಿಗೆ ಜೂ.1ರಂದು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

ಉಡುಪಿ: ಅನೇಕ ದಶಕಗಳಿಂದ ಉಡುಪಿಯ ಜನತೆಗೆ ಆರೋಗ್ಯ ಸೇವೆ ನೀಡುತ್ತಿರುವ ಡಾ. ಟಿ. ಎಂ. ಎ. ಪೈ ಆಸ್ಪತ್ರೆಯು ಉತ್ತಮ ಮತ್ತು ಉನ್ನತೀಕರಿಸಿದ ಮೂಲಸೌಕರ್ಯಗಳೊಂದಿಗೆ ಜೂ.1ರಂದು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.ರಾ.ಹೆ.ಯ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿ 1.40 ಎಕರೆ ವಿಸ್ತೀರ್ಣದಲ್ಲಿ ಈ ಕ್ಯಾಂಪಸನ್ನು ನಿರ್ಮಿಸಲಾಗಿದೆ. ಆಸ್ಪತ್ರೆಯು ಹೆದ್ದಾರಿ ಮತ್ತು ನಗರ ಹೀಗೆ ಎರಡೂ ಬದಿಗಳಿಂದ ಪ್ರವೇಶ ಮತ್ತು ನಿರ್ಗಮನವನ್ನು ಹೊಂದಿದೆ.ಈ ಹೊಸ ಕಟ್ಟಡದ ತಳ ಅಂತಸ್ತು, ನೆಲ ಮಹಡಿ ಮತ್ತು ಮೇಲೆ 6 ಮಹಡಿಗಳನ್ನು ಹೊಂದಿದ್ದು, ಒಟ್ಟು 1.37 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಕಟ್ಟಡದ ಸುಮಾರು ಶೇ 80 ಭಾಗ ಹವಾನಿಯಂತ್ರಿತವಾಗಿದ್ದು, ಒಟ್ಟು 152 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಈ ಆಸ್ಪತ್ರೆಯಲ್ಲಿ ಆಧುನಿಕ ವಿನ್ಯಾಸ, ಸುಧಾರಿತ ವೈದ್ಯಕೀಯ ಉಪಕರಣಗಳು ಮತ್ತು ರೋಗಿ ಸ್ನೇಹಿ ಮೂಲಸೌಕರ್ಯಗಳೊಂದಿಗೆ, ಪ್ರೀಮಿಯಂ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜನರಲ್ ವಾರ್ಡ್‌ಗಳ ಜೊತೆಗೆ ಸೆಮಿ ಸ್ಪೆಷಲ್, ಸ್ಪೆಷಲ್ ಮತ್ತು ಅಲ್ಟ್ರಾ ಸ್ಪೆಷಲ್ ಕೊಠಡಿಗಳಿದ್ದು, ತಜ್ಞ ವೈದ್ಯರು, ತುರ್ತು ಸೇವೆಗಳು ಮತ್ತು ಆರಾಮದಾಯಕ ರೋಗಿಗಳ ಆರೈಕೆಗೆ ಸುಲಭವಾಗಿ ಲಭ್ಯವಾಗುವಂತೆ ಈ ಸೌಲಭ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.ಆಸ್ಪತ್ರೆಯಲ್ಲಿ ಅರಿವಳಿಕೆ ಶಾಸ್ತ್ರ, ಚರ್ಮರೋಗ, ದಂತ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಜನರಲ್ ಮೆಡಿಸಿನ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ನೇತ್ರ ಶಾಸ್ತ್ರ, ಔದ್ಯೋಗಿಕ ಚಿಕಿತ್ಸೆ, ಪೀಡಿಯಾಟ್ರಿಕ್ಸ್, ಆರ್ಥೋಪೆಡಿಕ್ಸ್, ಫಿಸಿಯೋಥೆರಪಿ, ಮನೋವೈದ್ಯಶಾಸ್ತ್ರ, ರೆಸ್ಪಿರೇಟರಿ ಚಿಕಿತ್ಸೆ, ಮಾತು ಮತ್ತು ಶ್ರವಣ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗಗಳನ್ನು ಹೊಂದಿದೆ.

ವಿಶಾಲ ಪಾರ್ಕಿಂಗ್‌ ವ್ಯವಸ್ಥೆ: ರೋಗಿಗಳ ಸುಗಮ ಸಂಚರಕ್ಕಾಗಿ ಎಸ್ಕಲೇಟರ್ ಮತ್ತು ನಾಲ್ಕು ಲಿಫ್ಟ್‌ಗಳು, ಅಗತ್ಯ ವಿಶಾಲ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, 10 ವಿಶೇಷ ಹಾಸಿಗೆಗಳು ಮತ್ತು ಆಂಬ್ಯುಲೆನ್ಸ್ ಬೆಂಬಲದೊಂದಿಗೆ ತುರ್ತು ಚಿಕಿತ್ಸೆ ಮತ್ತು ಅಪಘಾತ ಆರೈಕೆ ವ್ಯವಸ್ಥೆ ಸದಾಕಾಲ ಲಭ್ಯವಿದೆ.ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಸಂಜೆ ಕ್ಲಿನಿಕ್‌ ಲಭ್ಯವಿದ್ದು, ಡೇ ಕೇರ್ ಸೌಲಭ್ಯಗಳು, ವಿಮೆ/ಕಾರ್ಪೊರೇಟ್ ಡೆಸ್ಕ್, 5 ಕಿಮೀ ವ್ಯಾಪ್ತಿಯೊಳಗೆ ಪ್ರಯೋಗಾಲಯ ಮಾದರಿ ಸಂಗ್ರಹ, ಗ್ಯಾಸ್ಟ್ರೋಸ್ಕೋಪಿ/ಕೊಲೊನೋಸ್ಕೋಪಿ ಸೇವೆಗಳು ಲಭ್ಯ ಇವೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.