ಇತ್ತೀಚೆಗೆ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ವತಿಯಿಂದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಉದ್ಘಾಟನೆ ನೆರವೇರಿತು.
ಉಡುಪಿ: ರಂಗಭೂಮಿ ಉಡುಪಿ, ವರ್ಷದಲ್ಲಿ 25ಕ್ಕೂ ಅಧಿಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಮೂಲಕ ಉಡುಪಿಯ ಇತಿಹಾಸ ಪುಟದಲ್ಲಿ ಭದ್ರವಾದ ಸ್ಥಾನ ಪಡೆದಿದೆ. ಇದು ಉಡುಪಿಯ ನಾವೆಲ್ಲಾ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.ಇತ್ತೀಚೆಗೆ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ಹಮ್ಮಿಕೊಂಡ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಇಂದು ಜನರ ಆಸಕ್ತಿಗೆ ತಕ್ಕಂತೆ ನಾಟಕಗಳನ್ನು ಮಾರ್ಪಾಟು ಮಾಡಿಕೊಳ್ಳಬೇಕೋ ಅಥವಾ ನಾಟಕಕ್ಕೆ ಸರಿಯಾಗಿ ಜನರನ್ನು ಕರೆಸುವ ಕೆಲಸ ಮಾಡಬೇಕೋ ಎಂಬ ಗೊಂದಲ ಸಂಘಟಕರನ್ನು ಕಾಡುತ್ತಿದೆ. ಈ ಎಲ್ಲಾ ಸವಾಲುಗಳ ನಡುವೆಯೇ ಛಲ ಬಿಡದೆ ಕಳೆದ 45 ವರ್ಷಗಳಿಂದ ಈ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿರುವ ರಂಗಭೂಮಿಯ ಸಾಧನೆ ಅಭಿನಂದನಾರ್ಹ ಎಂದು ಅವರು ಹೇಳಿದರು.ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿ ಉಡುಪಿ ಮಕ್ಕಳಿಗೆ ರಂಗ ಶಿಕ್ಷಣವನ್ನು 25 ಶಾಲೆಗಳಿಗೆ ನೀಡುತ್ತಿದೆ. ಈ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂಬ ಹಂಬಲ ನಮ್ಮದು ಎಂದರು.
ಉದ್ಯಮಿ ಸತ್ಯಾನಂದ ನಾಯಕ್ ಆತ್ರಾಡಿ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನ ಉಡುಪಿ ಅಧ್ಯಕ್ಷ ರಂಜನ್ ಕೆ. ಶುಭ ಹಾರೈಸಿದರು. ಎಂಜಿಎo ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಉಪಪ್ರಾಂಶುಪಾಲ ವಿಶ್ವನಾಥ ಪೈ, ರಂಗಭೂಮಿ ಉಡುಪಿಯ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿಯೂರು ಮತ್ತು ಎನ್. ರಾಜಗೋಪಾಲ್ ಬಲ್ಲಾಳ್, ಕಾರ್ಯದರ್ಶಿ ಶ್ರೀಪಾದ ಹೆಗಡೆ, ವಿವೇಕಾನಂದ ಎನ್., ಕೋಶಾಧಿಕಾರಿ ಯು. ಭೋಜ, ಪೂರ್ಣಿಮಾ ಸುರೇಶ್, ಅಮಿತಾಂಜಲಿ ಕಿರಣ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.