ಸಾರಾಂಶ
ಕನ್ನಡಪ್ರಭ ವಾರ್ತೆ ಉಚ್ಚಿಲ
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ ಕಳೆದ 10 ದಿನಗಳಿಂದ ಅತ್ಯಂತ ವಿಜೃಂಭಣೆಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಉಡುಪಿ - ಉಚ್ಚಿಲ ದಸರಾಕ್ಕೆ ಶನಿವಾರ ವೈಭವದ ಶೋಭಾಯಾತ್ರೆಯೊಂದಿಗೆ ತೆರೆಬಿತ್ತು.ಶನಿವಾರ ಸಂಜೆ, ದೇವಳದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರ ಸಹಿತ ಶಾರದಾ ಮೂರ್ತಿಗೆ ಮಹಾಪೂಜೆಯ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಪುಷ್ಪಾರ್ಚನೆ ನಡೆಸಲಾಯಿತು. ನಂತರ ಈ ದಸರಾದ ರೂವಾರಿ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ ಕುಂದರ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಪುಷ್ಪಾರ್ಚನೆಗೈದರು.ನಂತರ ಶೋಭಾಯಾತ್ರೆ ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ, ಎರ್ಮಾಳು ಮಸೀದಿ ವರೆಗೆ ಸಾಗಿ ಅಲ್ಲಿಂದ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿ, ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡ ಭಾಗದ ಬೀಚ್ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಿತು.ಶೋಭಾಯಾತ್ರೆಯಲ್ಲಿ ಭವ್ಯವಾಗಿ ಅಲಂಕೃತ ನವದುರ್ಗೆಯರ ವಾಹನಗಳು, ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ತುಳುನಾಡಿನ ಸಂಸ್ಕೃತಿ, ಮೀನುಗಾರಿಕೆಯನ್ನು ಪ್ರತಿಬಿಂಬಿಸುವ ವಿವಿಧ ಟ್ಯಾಬ್ಲೊಗಳು, ಕಲಾ ತಂಡಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಸಹಸ್ರ ಸಂಖ್ಯೆಯ ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿತು.